ಸಿಎಂ ಬಿಎಸ್‍ವೈಯಿಂದ ಗೂಂಡಾಗಿರಿ: ಡಿಕೆ ಶಿವಕುಮಾರ್

Public TV
1 Min Read

ಬೆಂಗಳೂರು: ಪೊಲೀಸ್ ಭದ್ರತೆಯನ್ನು ವಾಪಸ್ ಪಡೆದ ಬೆನ್ನಲ್ಲೇ ಈಗಲ್‍ಟನ್ ರೆಸಾರ್ಟ್ ನಲ್ಲಿದ್ದ ಶಾಸಕರು ಬೇರೆ ಸ್ಥಳಕ್ಕೆ ಶಿಫ್ಟ್ ಆಗುತ್ತಿದ್ದಾರೆ.

ಬಿಡದಿಯ ಈಗಲ್‍ಟನ್ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ಮಾಜಿ ಸಚಿವ ಜನಾರ್ದನ ರೆಡ್ಡಿ ನಮ್ಮ ಶಾಸಕರಿಗೆ ಕರೆ ಮಾಡುವ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ. ಬಿಜೆಪಿಯವರು ರೆಡ್ಡಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಹೇಳುತ್ತಾರೆ. ಆದರೆ ಅವರೇ ನಮ್ಮ ಶಾಸಕರಿಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಸಕರನ್ನು ಒತ್ತೆಯಿಟ್ಟು ಕಾಂಗ್ರೆಸ್, ಜೆಡಿಎಸ್ ಗುಂಡಾಗಿರಿ ಮಾಡುತ್ತಿದ್ದಾರೆ ಎನ್ನುವ ಬಿಎಸ್‍ವೈ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಸಿಕ್ಕಿದ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ರಾಮನಗರದ ಎಸ್‍ಪಿಯನ್ನು ವರ್ಗಾವಣೆ ಮಾಡಿದ್ದಾರೆ. 100 ಜನ ಶಾಸಕರಿದ್ದು ನಮ್ಮ ರಕ್ಷಣೆಗಿದ್ದ ಪೊಲೀಸರನ್ನು ವಾಪಸ್ ಮಾಡಲಾಗಿದೆ. ಈ ರೀತಿ ಮಾಡುವುದು ಗುಂಡಾಗಿರಿ ಎಂದು ತಿರುಗೇಟು ನೀಡಿದರು.

ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರು ನಿಮ್ಮ ಜೊತೆ ಇಲ್ಲ ಎಂದು ಕೇಳಿದ್ದಕ್ಕೆ ಯಾರು ನಮ್ಮ ಪಕ್ಷವನ್ನು ಬಿಡಲ್ಲ. 24 ಗಂಟೆಯ ಒಳಗಡೆ ಅವರು ನಮ್ಮ ಜೊತೆ ಇರಲಿದ್ದಾರೆ. ಒಂದು ವೇಳೆ ಅವರು ನಮ್ಮ ಪಕ್ಷವನ್ನು ಬಿಟ್ಟರೆ ಅಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ದಂಗೆ ಏಳುತ್ತಾರೆ ಎಂದು ತಿಳಿಸಿದರು.

ಕೊಚ್ಚಿಗೆ ಹೋಗುತ್ತಿರಾ ಎಂದು ಕೇಳಿದ್ದಕ್ಕೆ, ಕೇರಳ, ತಮಿಳುನಾಡು, ಗೋವಾ, ವಿಶಾಖಪಟ್ಟಣಂಗೆ ಹೋಗಬಹುದು. ಆದರೆ ಎಲ್ಲಿಗೆ ಹೋಗಬೇಕು ಎನ್ನುವ ಬಗ್ಗೆ ಇನ್ನು ನಿರ್ಧಾರ ಆಗಿಲ್ಲ. ಸಭೆ ನಡೆಸಿ ನಾವು ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *