– ಅ.16ರಂದು ಎಐಸಿಸಿ, ಕೆಪಿಸಿಸಿ ಚುನಾವಣೆ
– ಕೆಪಿಸಿಸಿ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ನಿರ್ಧರಿಸಿಲ್ಲ: ಡಿ.ಕೆ.ಶಿವಕುಮಾರ್
ರಾಯಚೂರು: ಸಿದ್ದರಾಮಯ್ಯನವರು ಅವರು ಇಲ್ಲಿಗೆ ಬಂದಾಗ ಅವರ ಫೋಟೋ ಹಾಕುತ್ತಾರೆ ಎಂದು ಬ್ಯಾನರ್‌ನಲ್ಲಿ ಸಿದ್ದರಾಮಯ್ಯ ಭಾವಚಿತ್ರವನ್ನು ಹಾಕದಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯ ಬ್ಯಾನರ್‌ನಲ್ಲಿ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಭಾವಚಿತ್ರ ಮಾಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್(DK Shivakumar) ಅವರು, ನಾನು ನನ್ನ ಫೋಟೋನೂ ಹಾಕಬೇಡಿ ಅಂದಿದ್ದೆ. ಫೋಟೋನೇ ರಾಜಕೀಯ ಅಲ್ಲ. ಫೋಟೋ ಹಾಕದಿದ್ದರೇ ಏನಾಯ್ತು? ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಸಮಜಾಯಿಸಿ ನೀಡಿದರು.
ಇದೇ ವೇಳೆ ಎಐಸಿಸಿ, ಕೆಪಿಸಿಸಿ(KPCC) ಚುನಾವಣೆ ಬಗ್ಗೆ ಮಾತನಾಡಿದ ಅವರು, ಅ. 16 ರಂದು ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ ಚುನಾವಣೆಯ ಮತದಾನ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪಕ್ಷದ ಮುಖಂಡರ ಅಭಿಪ್ರಾಯದ ಮೇರೆಗೆ ನಿರ್ಧರಿಸುತ್ತೇನೆ. ಅದೇ ರೀತಿ ಎಐಸಿಸಿ(AICC) ಅಧ್ಯಕ್ಷೀಯ ಚುನಾವಣೆಯಲ್ಲಿ ರಾಹುಲ್ ಗಾಂಧಿ(Rahul Gandhi) ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಒಟ್ಟಾರೆಯಾಗಿ ರಾಜ್ಯ ದೇಶದಲ್ಲಿ ಶಾಂತಿ ನೆಲೆಸಲು, ಬೆಲೆ ಏರಿಕೆ ತಪ್ಪಿಸಲು, ರೈತರಿಗೆ ಪ್ರೋತ್ಸಾಹ ಬೆಲೆ ಸಿಗಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ರಾಯಚೂರು ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಎರಡು ದಿನ 50 ಕಿ.ಮೀ ಪಾದಯಾತ್ರೆ ಮಾಡಲಿದ್ದು, ರಾಜ್ಯದಲ್ಲಿ ಒಟ್ಟು 510 ಕಿ.ಮೀ ನಡೆಯಲಿದ್ದಾರೆ. ರಾಯಚೂರು ನಗರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಅದರಲ್ಲಿ ಡಿಜಿಟಲ್ ನೋಂದಣಿ, ಡಿಜಿಟಲ್ ಭಾಗವಹಿಸುವಿಕೆ ವ್ಯವಸ್ಥೆಯಿದೆ. ಯಾತ್ರೆ ವೇಳೆ ರಾಹುಲ್ ಗಾಂಧಿ ಎಲ್ಲ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಅ. 22 ಹಾಗೂ 23ಕ್ಕೆ ರಾಹುಲ್ ಗಾಂಧಿ ರಾಯಚೂರಿಗೆ ಬರುತ್ತಾರೆ ಎಂದು ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಈಗ ಏನು ಬಯಲಿಗೆಳೆಯುತ್ತಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಹಗರಣವಾಗಿದ್ದರೆ ಕಳೆದ 3 ವರ್ಷದಿಂದ ಯಾಕೆ ಬೆಳಕಿಗೆ ತರಲಿಲ್ಲ. 40% ಆರೋಪ ನಾವು ಮಾಡುತ್ತಿದ್ದೇವೆ. ಬಿಜೆಪಿಯ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಯಾವ ಸವಾಲು ಬೇಕಾದರೂ ನಾವು ಎದುರಿಸಲು ಸಿದ್ಧರಿದ್ದೇವೆ ಎಂದ ಅವರು, ರಾಹುಲ್ ಗಾಂಧಿ ಐರನ್ ಲೆಗ್ ಅಂತ ಅವನ್ಯಾರೋ ಹೇಳಿದ್ದಾನೆ. ಕಬ್ಬಿಣದಿಂದ ಸೂಜಿ ಮಾಡಬಹುದು ಕತ್ತರಿನೂ ಮಾಡಬಹುದು ರಾಹುಲ್ ಗಾಂಧಿ ಸೂಜಿಯಿಂದ ದೇಶವನ್ನು ಹೊಲಿಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು(BJP) ಜನೋತ್ಸವ ಮಾಡುತ್ತೇವೆ ಎಂದು ಈಗ ಜನ ಸ್ಪಂದನ ಎನ್ನುತ್ತಿದ್ದಾರೆ. ಇಷ್ಟು ದಿನ ಬಿಜೆಪಿಯವರು ಜನ ಸ್ಪಂದನ ಮಾಡಿಲ್ವಾ. 600 ಭರವಸೆ ಕೊಟ್ಟಿದ್ದರೂ, ಇದರಲ್ಲಿ 10% ಸಹ ಈಡೇರಿಸಿಲ್ಲ. ಇದು ವಚನ ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು. ಇದನ್ನೂ ಓದಿ: 3 ತಿಂಗಳಲ್ಲಿ 100 ಕೋಟಿ ರೂ. ಸೀಜ್ ಮಾಡಿದ ED – ಈ ಹಣ ಏನ್ ಮಾಡ್ತಾರೆ ಗೊತ್ತಾ?
ಪಿಎಸ್‍ಐ(PSI) ನೇಮಕಾತಿ ಹಗರಣದಲ್ಲಿ ಬಿಜೆಪಿ ಶಾಸಕನ ಆಡಿಯೋ ಪ್ರಕರಣದ ಕುರಿತು ಮಾತನಾಡಿದ ಅವರು, ಆಡಿಯೋದಲ್ಲಿ ನಂದೇ ವಾಯ್ಸ್ ಇದು ಎಂದು ಶಾಸಕ ಬಸವರಾಜ್ ಧಡೇಸುಗೂರು ಒಪ್ಪಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿ ನೋಟಿಸ್ ಕೊಟ್ಟು ಕರೆಯಿಸಬೇಕು, ವಿಚಾರಣೆ ಮಾಡಬೇಕು. ಲಂಚ ತಗೆದುಕೊಂಡರೂ ಅದು ಅಪರಾಧ, ಲಂಚ ಕೊಟ್ಟಿದ್ದರೂ ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ವಿಧಾನಸಭೆ ಕಲಾಪ: ಉಮೇಶ್ ಕತ್ತಿ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ- ಸಿಎಂ