ಗನ್ ಪಾಯಿಂಟ್‍ಲ್ಲಿ ನಿವೇಶನ ಬರೆಸಿಕೊಂಡ ಆರೋಪ – ಮಹಿಳೆಯರಿಂದ ದೂರು ಕೊಡಿಸಲಿ: ಹೆಚ್‍ಡಿಕೆಗೆ ಡಿಕೆಶಿ ಸವಾಲ್

Public TV
2 Min Read

– ನಾನು ಮಾಜಿ ಪಿಎಂ ಮಗ ಅಲ್ಲ, ರೈತನ ಮಗ

ಬೆಂಗಳೂರು: ವಿಧವೆಯರ ನಿವೇಶನವನ್ನು ಗನ್ ಪಾಯಿಂಟ್ ಇಟ್ಟು ಬರೆಸಿಕೊಂಡೆ ಎಂದು ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ. ಆ ಮಹಿಳೆಯರನ್ನ ಕರೆದುಕೊಂಡು ಬಂದು ದೂರು ಕೊಡಿಸಿ ಎಂದು ಹೆಚ್‍ಡಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಸವಾಲು ಹಾಕಿದ್ದಾರೆ.

ತಮ್ಮ ನಿವಾಸದ ಎದುರು ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹೆಚ್‍ಡಿಕೆ ನನಗೆ ವಾರ್ನಿಂಗ್ ಕೊಡ್ತಾರೆ. ನನ್ನನ್ನು ಕೆಣಕಬೇಡಿ ಅಂತಾರೆ. ಬಿಚ್ಚಪ್ಪ, ಏನಿದೆ ನಿನ್ ಹತ್ರ ಎಂದು ಅವರು ಗುಡುಗಿದ್ದಾರೆ. ಇದೇ ವೇಳೆ ಹೆಚ್‍ಡಿಕೆ ಗಂಡಸ್ತನದ ರಾಜಕೀಯ ಮಾಡಿ ಎಂಬ ಹೇಳಿಕೆಗೆ, ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು, ಗಂಡಸ್ತನದ ಎಲ್ಲಾ ಶಕ್ತಿ ಅವರಲ್ಲಿದೆ. ಕುಮಾರಸ್ವಾಮಿ ಹಿಂದೆ ಏನು ಮಾತನಾಡಿದ್ದಾರೆ ನೆನಪಿಟ್ಟುಕೊಳ್ಳಬೇಕು. ನನ್ನನ್ನು ಮಿಲಿಟರಿಯವರು ಬಂದು ಕರೆದುಕೊಂಡು ಹೋಗ್ತಾರೆ ಎಂದಿದ್ದರು. ಅಂದರೆ ವಾಪಸ್ ಜೈಲಿಗೆ ಹೋಗ್ತೀನಿ ಎಂದಿದ್ದರು. ನಾನು ಜೈಲಿಗೆ ಹೋಗಿದ್ದಾಗ ಅವರು ಬಂದು ಭೇಟಿಯಾಗಿದ್ದರು. ಆ ವೇಳೆ ನನಗೆ ಎಷ್ಟು ಶಕ್ತಿ ಇತ್ತು ಜೈಲಲ್ಲಿ ಎಂದು ಅವರು ನೋಡಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ನನ್ನ ಮೇಲೆ, ಹೆಂಡತಿ ಮೇಲೆ, ತಮ್ಮ, ತಂಗಿ ಮೇಲೆ ಅದಿರು ಕದ್ದಿದ್ದೇವೆ ಎಂದು ಕೇಸ್ ಹಾಕಿಸಿದ್ದರು. ಆ ದಿನ ನನ್ನ ಮಗಳ ಬರ್ತ್‍ಡೇ ಆಗಿತ್ತು. ಅದೇ ದಿನ ಎಫ್‍ಐಆರ್ ಆಗಿತ್ತು. ನನಗೆ ಡೇಟ್ ಚೆನ್ನಾಗಿ ನೆನಪಿದೆ ಎಂದಿದ್ದಾರೆ.

ನಾನು ಅವರನ್ನು ಅಣ್ಣ ಎಂದು ಸ್ವೀಕರಿಸಿದ್ದೆ. ಆದರೆ ಅವರು ಯಾವಾಗ ಇದನ್ನೆಲ್ಲ ಮಾತಾಡಿದರೋ ಆಗ ಅದೆಲ್ಲ ಹೋಯ್ತು. ನಮ್ಮ ಸರ್ಕಾರವನ್ನು ಹತ್ತು ತಿಂಗಳಲ್ಲಿ ತೆಗೀತೀವಿ ಎಂದಿದ್ದಾರೆ. ನಮ್ಮ ಸರ್ಕಾರವನ್ನು ಮುಟ್ಟಲಿ ನೋಡೋಣ. ಬಿಜೆಪಿಯಲ್ಲಿ ಏನೇನಾಗ್ತಿದೆ ಗೊತ್ತಾ? ಬಿಜೆಪಿ ಒಳಗೆ ಏನೇನೋ ಆಗ್ತಿದೆ. ಅದರ ಬಗ್ಗೆ ಮಾತಾಡಲಿ ಎಂದು ಅವರು ಕುಟುಕಿದ್ದಾರೆ.

ಇನ್ನೂ ನಾನು ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಎಲ್ಲಿ ಹೇಳಿದ್ದೇನೆ? ವಿಚಾರಗಳಿವೆ ಎಂದಿದ್ದೆ. ವಿಧಾನಸಭೆಯಲ್ಲಿ ಅವೆಲ್ಲ ಚರ್ಚೆಗೆ ಬರಲಿ. ವಿಜಯೇಂದ್ರ ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾನೆ. ನಾನು ಹಣ ವರ್ಗಾವಣೆ ಮಾಡಿದ್ದೀನಾ? ಲಂಚ ಪಡೆದಿದ್ದೇನಾ ಎಂದು ಏಕವಚನದಲ್ಲಿಯೇ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ, ರಾಜೀನಾಮೆ ಕೊಡುವ ಸಂದರ್ಭ ಉದ್ಭವಿಸಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ ಹಾಗೂ ಜೆಡಿಎಸ್‍ನವರಿಗೆ ಸಿಎಂ ಮೇಲೆ ಅಸೂಯೆ ಎಂದು ಅವರು ದೋಸ್ತಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ನಾನು ಬಿಜೆಪಿ, ಜೆಡಿಎಸ್‍ನ ಗೊಡ್ಡು ಬೆದರಿಕೆಗೆ ಹೆದರಲ್ಲ. ನಾನು ಯೂಟರ್ನ್ ಹೊಡೆಯಲ್ಲ. ನನ್ನದು ನೇರಾನೇರ ಹೋರಾಟ. ಹಿಂದೆ ಪೆನ್‍ಡ್ರೈವ್ ಹಂಚಿದ ಎಂದು ನನ್ನ ಮೇಲೆ ಹೇಳಿದ್ದರು. ನಾನು ಮೂರ್ಖ ಅಲ್ಲ. ಈಗ ಪ್ರೀತಂಗೌಡ ಎಂದು ಹೇಳ್ತಾರೆ. ಈಗ ಯೂಟರ್ನ್ ಹೊಡಿತಾರೆ ಎಂದು ಕುಟುಕಿದ್ದಾರೆ.

ನಾನು ಪ್ರಧಾನಿ, ಸಿಎಂ ಮಗ ಅಲ್ಲ. ಮಧ್ಯಮ ವರ್ಗದ ರೈತನ ಮಗ. ನನ್ನ ಮೇಲೆ ಇ.ಡಿ ಕೇಸ್ ಯಾಕೆ ಹಾಕಿದ್ರು? ನಾನ್ಯಾಕೆ ಜೈಲಿನಲ್ಲಿದ್ದೆ? ಇದು ವಿಜಯೇಂದ್ರಗೆ ಗೊತ್ತಾ? ಇಡಿ ಕೇಸ್ ಕೋರ್ಟಿನಲ್ಲಿ ವಜಾ ಆಗಿದೆ ಎಂದಿದ್ದಾರೆ.

Share This Article