ನಾಳೆ ಡಿಕೆಶಿ ಮನೆಯಲ್ಲಿ ಸಿಎಂಗೆ ಬ್ರೇಕ್‌ಫಾಸ್ಟ್ – ನಾಟಿ ಕೋಳಿ ಸಾರು ಸ್ಪೆಷಲ್

2 Min Read

– ಪಕ್ಷದ ವಿಚಾರ, ದೆಹಲಿಗೆ ಸರ್ವಪಕ್ಷ ನಿಯೋಗ ಬಗ್ಗೆ ಚರ್ಚೆ ಸಾಧ್ಯತೆ

ಬೆಂಗಳೂರು: ಒಂದು ಕಡೆ ಕಾಂಗ್ರೆಸ್ ಗೊಂದಲಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದರೆ ಇನ್ನೊಂದು ಕಡೆ ಸಿಎಂ-ಡಿಸಿಎಂ ನಡುವೆ ಬ್ರೇಕ್‌ಫಾಸ್ಟ್ ಮೀಟಿಂಗ್ (Breakfast Meeting) ಮುಂದುವರೆದಿದೆ. ನಾಳೆ ಬೆಳಗ್ಗೆ 9:30ಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸಿದ್ದರಾಮಯ್ಯನವರಿಗೆ (Siddaramaiah) ಉಪಹಾರ ಆತಿಥ್ಯ ಆಯೋಜಿಸಲಾಗಿದೆ.

ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಮುಂದುವರೆಸಿದ್ದಾರೆ. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಡಿಸಿಎಂಗೆ ಬ್ರೇಕ್‌ಫಾಸ್ಟ್ ಆಯೋಜನೆ ಮಾಡಲಾಗಿತ್ತು. ಅಂದೇ ಸಿಎಂಗೂ ತಮ್ಮ ಮನೆಗೆ ಬ್ರೇಕ್‌ಫಾಸ್ಟ್‌ಗೆ ಬರುವಂತೆ ಡಿಕೆಶಿ ಆಹ್ವಾನಿಸಿದ್ದರು. ಹೀಗಾಗಿ ನಾಳೆ ಸಿಎಂಗೆ ಡಿಸಿಎಂ ಬ್ರೇಕ್‌ಫಾಸ್ಟ್ ಆತಿಥ್ಯ ಇರಲಿದ್ದು, ಸಹಜವಾಗಿ ರಾಜಕೀಯ ಕುತೂಹಲ ಮೂಡಿಸಿದೆ. ಇದನ್ನೂ ಓದಿ:  ಡಿಸಿಎಂ ಪರ ಒಕ್ಕಲಿಗ ಶ್ರೀಗಳ ಹೇಳಿಕೆ ವಿಚಾರ; ಪರ ವಿರೋಧಕ್ಕೆ ವೇದಿಕೆ – ಹೆಚ್‌ಡಿಕೆ ಆಕ್ಷೇಪಕ್ಕೆ ಶಾಸಕ ಬಾಲಕೃಷ್ಣ ತಕರಾರು

 

ಸಿದ್ದರಾಮಯ್ಯನವರಿಗೆ ನಾಟಿ ಕೋಳಿ ಇಷ್ಟ ಎನ್ನುವ ಕಾರಣಕ್ಕೆ ಬೆಳಗ್ಗಿನ ತಿಂಡಿಗೆ ನಾಟಿ‌ ಕೋಳಿ ಸಾರಿನ ಆತಿಥ್ಯ ನೀಡಲು ಡಿಕೆಶಿ ಮುಂದಾಗಿದ್ದಾರೆ. ಬೆಳಗ್ಗೆ ತಿಂಡಿಗೆ ಇಡ್ಲಿ ನಾಟಿ ಕೋಳಿ ಸಾರು ಹಾಗೂ ನಾಟಿಕೋಳಿ ಫ್ರೈ ಸ್ಪೆಷಲ್ ಮೆನು ಸಿದ್ಧಪಡಿಸಲಾಗಿದೆ. ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ಕನಕಪುರದ ನಾಟಿ‌ ಕೋಳಿಯನ್ನೇ ಸಿಎಂಗೆ ಉಣಬಡಿಸಲಾಗುತ್ತದೆ.

ಬ್ರೇಕ್‌ಫಾಸ್ಟ್ ಸಭೆ ಬಗ್ಗೆ ಮಾತಾಡಿದ ಡಿಕೆಶಿ, ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಗುಂಪು ಇಲ್ಲ. ನಾನು ಮತ್ತು ಸಿಎಂ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ. 140 ಜನ ಶಾಸಕರೂ ನಮ್ಮವರೇ, ಒಟ್ಟಿಗೇ ಹೋಗುತ್ತೇವೆ. ಬ್ರೇಕ್‌ಫಾಸ್ಟ್ ಅಗತ್ಯ ಇಲ್ಲ, ಆದರೂ ಮಾಧ್ಯಮಗಳ ಒತ್ತಡಕ್ಕೆ ಇದೆಲ್ಲ ಎಂದರು. ಇದನ್ನೂ ಓದಿ:  ಇಂದಿನಿಂದ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಗ್ರಾಮ ಪಂಚಾಯತ್‌ನಲ್ಲೇ 11ಬಿ ಖಾತೆ ವಿತರಣೆ, ನೋಂದಣಿ ಪುನಾರಂಭ

ನಾಳೆ ಪಕ್ಷದ ಗೊಂದಲಗಳ ಜತೆಗೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆಯೂ ಸಿಎಂ ಡಿಸಿಎಂ ತಿರ್ಮಾನ ಮಾಡುವ ಸಾಧ್ಯತೆಯಿದೆ. ಇಂದಿನಿಂದ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ ನಲ್ಲಿ ರಾಜ್ಯದ ಜಲ ಯೋಜನೆ, ಬೆಳೆಗಳಿಗೆ ಬೆಂಬಲ ಬೆಲೆ, ಖರೀದಿ ಕೇಂದ್ರ, ಅನುದಾನ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಕೇಂದ್ರದ ಗಮನಕ್ಕೆ ತರಲು ನಿಯೋಗ ಕೊಂಡೊಯ್ಯಲಿದ್ದಾರೆ. ಈ ವಾರದಲ್ಲೇ ದೆಹಲಿಗೆ ಸಿಎಂ ಡಿಸಿಎಂ ಹೋಗುವ ಸಾಧ್ಯತೆಯಿದ್ದು, ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ರಾಜ್ಯದ ಎಲ್ಲ ಸಂಸದರ ಜತೆ ಚರ್ಚೆ ನಡೆಸಿ ಪ್ರಧಾನಿ ಹಾಗೂ ಕೇಂದ್ರದ ಸಚಿವರಿಗೆ ಮನವಿ ಕೊಡಲಿದ್ದಾರೆ.

ಒಂದುವೇಳೆ ಸಿಎಂ-ಡಿಸಿಎಂ ಈ ವಾರ ದೆಹಲಿಗೆ ಹೋದರೆ ಹೈಕಮಾಂಡ್ ನಾಯಕರನ್ನೂ ಸಿಎಂ-ಡಿಸಿಎಂ ಭೇಟಿ ಮಾಡುವ ಸಾಧ್ಯತೆ ಇದೆ. ಡಬಲ್ ಬ್ರೇಕ್‌ಫಾಸ್ಟ್ ವಿಚಾರ, ಇಬ್ಬರ ನಡುವಿನ ಒಮ್ಮತ ಬಗ್ಗೆ ವರಿಷ್ಠರಿಗೆ ಮಾಹಿತಿ‌ ಕೊಡಲಿದ್ದಾರೆ.

 

Share This Article