ಡಿಕೆಶಿ ಸಿಎಂ ಆಗಲೆಂದು ನಾಗ ಸಾಧುಗಳಿಂದ ಆಶೀರ್ವಾದ – ಯಾರು ಈ ನಾಗ ಸಾಧುಗಳು?

2 Min Read

– `ಅಗ್ರʼಸ್ಥಾನಕ್ಕಾಗಿ ಬಿಗಿ ಪಟ್ಟು – ಸಿಎಂ ಆಗೇಬಿಡ್ತಾರಾ ಡಿಕೆಶಿ?

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ಮುಖ್ಯಮಂತ್ರಿ ಹುದ್ದೆಯ ಶೀತಲ ಸಮರ ತೀವ್ರಗೊಂಡಿದೆ. ಮುಂದೊಂದು ದಿನ ಇಂಥ ದಿನ ಬಂದೇ ಬರುತ್ತೆ ಅಂತ ಕಾಂಗ್ರೆಸ್ ಹೈಕಮಾಂಡ್‌ಗೆ ಗೊತ್ತಿತ್ತು. ಇಲ್ಲಿವರೆಗೆ ದಿನ ದೂಡ್ತಾ ಬಂದಿದ್ದ ಹೈಕಮಾಂಡ್‌ಗೆ ಕುರ್ಚಿ ಕದನಕ್ಕೆ ಬ್ರೇಕ್ ಹಾಕಲೇಬೇಕಾದ ಅನಿವಾರ್ಯತೆಯಲ್ಲಿದೆ. ಗದ್ದುಗೆ ಗುದ್ದಾಟಕ್ಕೆ ಅಂತ್ಯ ಫುಲ್ ಸ್ಟಾಪ್ ಇಡಲೇಬೇಕಿದೆ.

ಸ್ವಲ್ಪ ದಿನ ಮುಂದೆ ತಳ್ಳೋಣ ಅನ್ನೋ ಉಮೇದಿನಲ್ಲಿದ್ದ ಹೈಕಮಾಂಡ್‌ಗೆ ಡಿಕೆ ಬಣದ ಪಟ್ಟು ಬಿಸಿ ಮುಟ್ಟಿಸಿದೆ. ಹೀಗಾಗಿ ಹೈಕಮಾಂಡ್ ಇದೀಗ ಧರ್ಮಸಂಕಟದಲ್ಲಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನ ಬೆಂಗಳೂರಿಗ ಕಳುಹಿಸಿ ಭುಗಿಲೆದ್ದ ಪಟ್ಟದ ಫೈಟ್‌ಗೆ ಮದ್ದರಿಯುವ ಯತ್ನ ಮಾಡ್ತಿದೆ. ಆದ್ರೆ ಮದ್ದು ವರ್ಕೌಟ್ ಆಗೋ ಹಾಗೆ ಕಾಣ್ತಿಲ್ಲ. ಅಲ್ಲದೆ ಖಡಕ್ ಆಗಿ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲೂ ಹೈಕಮಾಂಡ್ ಕೂಡ ಇಲ್ಲ. ಈ ನಡುವೆ ಡಿಕೆಶಿ ಬೆಂಬಲಿತ ಮತ್ತೊಂದು ಬಣ ದೆಹಲಿಗೆ ಎಂಟ್ರಿ ಕೊಟ್ಟಿರೋದು ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿದೆ.

ಡಿಕೆಶಿಗೆ ನಾಗ ಸಾಧುಗಳ ಆಶೀರ್ವಾದ
ʻಪವರ್‌ ಫೈಟ್‌ʼ ನಡುವೆ ಕಾಶಿಯಿಂದ ಬಂದ ನಾಗ ಸಾಧುಗಳ (Naga Sadhu) ಆಶೀರ್ವಾದ ಡಿಸಿಎಂ ಡಿಕೆಶಿ ಅವರಿಗೆ ದೊರೆತಿದೆ. ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಬಂದ ನಾಗ ಸಾಧುಗಳು ಡಿಕೆಶಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಈ ಬಗ್ಗೆ ಪ್ರತಕ್ರಿಯಿಸಿದ ಸಾಧುಗಳು, ಶಿವಕುಮಾರ್‌ ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದೇನೆ. ಅವ್ರು ಸಿಎಂ ಆಗ್ತಾರೆ ಎಂದು ಹೇಳಿ ತೆರಳಿದ್ದಾರೆ.

ನಾಗ ಸಾಧುಗಳು ಎಂದರೆ ಯಾರು?
ನಾಗ ಸಾಧುಗಳ ಲೋಕವೇ ಚಿತ್ರ ವಿಚಿತ್ರ. ಅವರು ನಮಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರನ್ನು ನಾವು ಧಾರ್ಮಿಕ ಯಾತ್ರೆಗಳಾದ ಮಾಹಾಕುಂಭಮೇಳ, ಕುಂಭಮೇಳದಂತಹ ಸಮಯದಲ್ಲಿ ಮಾತ್ರ ಕಾಣಬಹುದು. ಅವರಲ್ಲೂ ಅಪಾರ ದೈವಿಕ ಶಕ್ತಿಯಿರುತ್ತದೆ ಎಂಬುದು ನಂಬಿಕೆ. ಅವರ ಕಟ್ಟುನಿಟ್ಟಿನ ದೈನಂದಿನ ನಿಯಮಗಳು ಮತ್ತು ಕಠಿಣವಾದ ಜೀವನ ಶೈಲಿ ಎಂತಹ ವ್ಯಕ್ತಿಯನ್ನಾದರೂ ಒಮ್ಮೆ ದಂಗಾಗಿಸುತ್ತದೆ. ದೂರದಿಂದ ಅಥವಾ ಹೊರಗಡೆಯಿಂದ ನೋಡುವಾಗ ಅವರು ಅಸ್ಠವ್ಯಸ್ಥವಾದ ಕೂದಲನ್ನು ಹೊಂದಿರುವಂತೆ, ಶಿಸ್ತನ್ನು ಮರೆತಂತೆ ಕಂಡರೂ ಅವರು ಮಾಡುವ ಪ್ರತಿಯೊಂದು ಕೆಲಸವೂ ವ್ಯವಸ್ಥಿತವಾಗಿ ಮಾಡುತ್ತಾರೆ. ಅವರು ನಾಗ ಸಾಧುಗಳು ಎನಿಸಿಕೊಳ್ಳಬೇಕಾದರೆ ಕಠಿಣವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾಗಾ ಸಾಧುಗಳಿಗೆ ದೀಕ್ಷೆ ನೀಡಿದ ನಂತರ ಅವರನ್ನು ವಿಶೇಷ ವರ್ಗದಲ್ಲಿ ಇರಿಸಲಾಗುತ್ತದೆ.

Share This Article