ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

Public TV
3 Min Read

-ದೇಶದ ಅನ್ನದಾತ, ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಜಯ

ನವದೆಹಲಿ: ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ದೇಶದ ಅನ್ನದಾತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದೆ. ಇದು ದೇಶದ ಅನ್ನದಾತ ಮತ್ತು ಕಾಂಗ್ರೆಸ್ ನ ಹೋರಾಟಕ್ಕೆ ಸಂದ ಚಾರಿತ್ರಿಕ ಜಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನವಾದ ಶುಕ್ರವಾರ ದೆಹಲಿಯಲ್ಲಿರುವ ಅವರ ಸ್ಮಾರಕ ಶಕ್ತಿ ಸ್ಥಳ ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೆರಳಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳು ಎಪಿಎಂಸಿ ಮಾರುಕಟ್ಟೆಗೆ ಮಾರಕವಾಗಿದ್ದವು. ಬೆಂಬಲ ಬೆಲೆಗೆ ಕಾನೂನು ರಕ್ಷಣೆ ನೀಡಿರಲಿಲ್ಲ. ದೇಶದ ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶ, ಒಪ್ಪಂದ ಕೃಷಿ ಸೇರಿದಂತೆ ಇತರೆ ಅಂಶಗಳು ರೈತರ ಭವಿಷ್ಯವನ್ನೇ ಸಮಾಧಿ ಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ದೇಶದ ಅನ್ನದಾತರು ಚಳಿ, ಮಳೆ, ಬಿಸಿಲೆನ್ನದೆ ಬೀದಿಗಿಳಿದು ಸುದೀರ್ಘ ಹೋರಾಟ ಮಾಡಿದ್ದರು. ಈ ಹೋರಾಟ ಹತ್ತಿಕ್ಕಲು ಸರ್ಕಾರ ಅಧಿಕಾರ, ಪೊಲೀಸ್ ಬಲ ಪ್ರಯೋಗಿಸಿತ್ತು. ಇದ್ಯಾವುದಕ್ಕೂ ಜಗ್ಗದ ರೈತರು ತಮ್ಮ ಭವಿಷ್ಯ ರಕ್ಷಣೆಗೆ ಬದ್ಧವಾಗಿ ನಿಂತರು ಎಂದಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

ಈ ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದ್ದು, ಕೇಂದ್ರ ಸರ್ಕಾರ ಇದೀಗ ಅನ್ನದಾತನ ಮುಂದೆ ಮಂಡಿಯೂರಿದೆ. ದೇಶದ ಅನ್ನದಾತನನ್ನು ಎದುರುಹಾಕಿಕೊಂಡು ಉಳಿದವರಿಲ್ಲ. ಅಂದು ಬ್ರಿಟೀಷರು ರೈತರ ಮೇಲೆ ದಬ್ಬಾಳಿಕೆ ನಡೆಸಿ ದೇಶದಿಂದ ಕಾಲ್ಕಿತ್ತರು. ಇಂದು ಬಿಜೆಪಿ ಅದೇ ತಪ್ಪು ಮಾಡಿ ಬುದ್ಧಿ ಕಲಿತಿದೆ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.

ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೈತನೂ ದೇಶದ ರಕ್ಷಣೆಯಲ್ಲಿ ಯೋಧನಂತೆ ಕೆಲಸ ಮಾಡಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು. ದುಷ್ಟ ಮನಸ್ಥಿತಿ ವಿರುದ್ಧ ಸಿಕ್ಕ ಗೆಲುವು. ರೈತರ ಹಿತದೃಷ್ಟಿಯಿಂದ ಕಾಂಗ್ರೆಸ್ ಕೂಡ ರೈತರ ಈ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು. ಕಾಂಗ್ರೆಸ್ ಪಕ್ಷ ಸಂಸತ್ತಿನ ಉಭಯ ಸದನಗಳು, ರಾಜ್ಯ ವಿಧಾನ ಮಂಡಲಗಳಲ್ಲಿ ಈ ಕರಾಳ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡಿತ್ತು. ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಈ ಕರಾಳ ಕಾಯ್ದೆಯ ಹಿಂದೆ ಅಡಗಿರುವ ಕೇಂದ್ರ ಸರ್ಕಾರದ ಷಡ್ಯಂತ್ರವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದೆವು. ಕೇಂದ್ರ ಸರ್ಕಾರ ಇನ್ನುಮುಂದಾದರು ತನ್ನ ಸರ್ವಾಧಿಕಾರಿ ಮನಃಸ್ಥಿತಿಯಿಂದ ಹೊರಬಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸಬೇಕು. ದೇಶ ಹಾಗೂ ಅನ್ನದಾತನ ಹಿತದೃಷ್ಟಿಯಿಂದ ಎಲ್ಲರ ಜತೆ ಚರ್ಚೆ ಮಾಡಬೇಕು ಎಂದು ಈ ಸಮಯದಲ್ಲಿ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಎಂದೆಂದಿಗೂ ರೈತರು ಸೇರಿದಂತೆ ಎಲ್ಲ ವರ್ಗವರ ಜೊತೆಗೆ ಇರಲಿದೆ. ಅವರ ಹಿತಾಸಕ್ತಿಗೆ ಧಕ್ಕೆಯಾದರೆ ಹೋರಾಟ ಮಾಡಲಿದೆ ಎಂದೂ ಶಿವಕುಮಾರ್ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *