ಎರಡು ಕೈ ಮುಗಿದು ಇಡಿ ಕಚೇರಿ ಪ್ರವೇಶಿಸಿದ ಡಿಕೆಶಿ

Public TV
2 Min Read

ನವದೆಹಲಿ: ವಿಚಾರಣೆಗೆ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಕಚೇರಿಯನ್ನು ಕೈ ಮುಗಿದು ಒಳ ಪ್ರವೇಶಿಸಿದ್ದಾರೆ.

ಇಂದು ಸಂಜೆ 4.50ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. ನಾವು ಮನುಷ್ಯರೇ. ಇಡಿ ಅಧಿಕಾರಿಗಳು ಬುದ್ಧಿವಂತರು. ಮೊದಲು ನ್ಯಾಯಾಲಯಕ್ಕೆ ಹೋಗಿದ್ದು ಈಗ ಮತ್ತೆ ನೋಟಿಸ್ ಕೊಟ್ಟಿದ್ದಾರೆ. ನಾನು ಓಡಿ ಹೋಗಲ್ಲ ಎನ್ನುವುದು ಅವರಿಗೂ ತಿಳಿದಿದೆ. ಖಂಡಿತ ಅವರಿಗೆ ಗೌರವ ನೀಡುತ್ತೇನೆ ಎಂದು ತಿಳಿಸಿದರು.  ನಂತರ ಸರ್ದಾರ್ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನಕ್ಕೆ ತೆರಳಿದರು.

ಕರ್ನಾಟಕ ಭವನದಿಂದ ಸಹೋದರ ಸುರೇಶ್ ತಮ್ಮ ನಿವಾಸಕ್ಕೆ ಕರೆದುಕೊಂಡು ಹೋದರು. ನಂತರ ಡಿಕೆಶಿ ನೇರವಾಗಿ ಖಾನ್ ಮಾರುಕಟ್ಟೆಯಲ್ಲಿರುವ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿ ತೆರಳಿದರು. ಸಂಜೆ 6.30ರ ವೇಳೆಗೆ ಕಚೇರಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕೈ ಮುಗಿದು ಒಳ ಪ್ರವೇಶಿಸಿದರು.

ಡಿಕೆಶಿ ಜೊತೆ ಸುರೇಶ್ ಅವರು ಕಚೇರಿಯ ಒಳ ಪ್ರವೇಶಿಲು ಮುಂದಾದಾಗ ಅಧಿಕಾರಿಗಳು ಅವರನ್ನು ತಡೆದರು. ಸಂಜೆ 7 ಗಂಟೆಯಿಂದ ಡಿಕೆ ಶಿವಕುಮಾರ್ ಅವರ ವಿಚಾರಣೆ ಆರಂಭವಾಗಿದೆ.

ಏನಿದು ಪ್ರಕರಣ?
2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *