ಬಿಜೆಪಿ ವಿರುದ್ಧ ಹೋರಾಟ – ಕೊನೆ ಗಳಿಗೆಯಲ್ಲಿ ವಿಫಲವಾಯ್ತು ರಾಹುಲ್ ತಂತ್ರ

Public TV
2 Min Read

ನವದೆಹಲಿ: ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಆಸ್ಪತ್ರೆಯಿಂದಲೇ ಹೋರಾಟ ಆರಂಭಿಸಬೇಕಿದ್ದ ರಾಹುಲ್ ಗಾಂಧಿಯ ಪ್ಲ್ಯಾನ್ ಕೊನೆ ಕ್ಷಣದಲ್ಲಿ ವಿಫಲವಾದ ವಿಚಾರ ಈಗ ಬೆಳಕಿಗೆ ಬಂದಿದೆ.

ಸಿಬಿಐನಿಂದ ಚಿದಂಬರಂ, ಇಡಿಯಿಂದ ಶಿವಕುಮಾರ್ ಅವರನ್ನು ಬಿಜೆಪಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿದೆ. ದೇಶದ ಆರ್ಥಿಕತೆ ಕುಸಿಯುತ್ತಿದ್ದು ಈ ವಿಚಾರ ಮರೆಮಾಚಲು ಕೇಂದ್ರ ಸರ್ಕಾರ ನಮ್ಮ ನಾಯಕರನ್ನು ಬಂಧಿಸುತ್ತಿದೆ ಎನ್ನುವುದನ್ನು ತಿಳಿಸಿ ರಾಹುಲ್ ಗಾಂಧಿ ಆರ್‌ಎಂಎಲ್‌ ಆಸ್ಪತ್ರೆಯಿಂದಲೇ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದರು. ಆದರೆ ಕೊನೆಯ 45 ನಿಮಿಷದಲ್ಲಿ ಇಡಿ ಅಧಿಕಾರಿಗಳು ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪರಿಣಾಮ ರಾಹುಲ್ ಗಾಂಧಿ ಅವರ ತಂತ್ರ ವಿಫಲಗೊಂಡಿತು ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ರಾಹುಲ್ ಪ್ಲಾನ್ ಏನಿತ್ತು?
ಬುಧವಾರ ರಾಹುಲ್ ಗಾಂಧಿ ಆರ್‌ಎಂಎಲ್‌ ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಬಂಧಿಸಿದ 24 ಗಂಟೆಯ ಒಳಗಡೆ ನ್ಯಾಯಾಲಯಕ್ಕೆ ಡಿಕೆ ಶಿವಕುಮಾರ್ ಅವರನ್ನು ಹಾಜರುಪಡಿಸಬೇಕಿತ್ತು. ಮಂಗಳವಾರ ರಾತ್ರಿ 8.20ರ ವೇಳೆಗೆ ಡಿಕೆಶಿಯನ್ನು ಬಂಧಿಸಿದ್ದರೂ ಬುಧವಾರ ಮಧ್ಯಾಹ್ನದವರೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿಲ್ಲ. ಡಿಕೆ ಶಿವಕುಮಾರ್ ಆರೋಗ್ಯ ಸರಿ ಇಲ್ಲದ ಕಾರಣ 48 ಗಂಟೆಗಳ ಕಾಲ ನಿಗಾದಲ್ಲಿ ಇಡಬೇಕು ಎಂದು ವೈದ್ಯರೊಬ್ಬರು ಹೇಳಿದ್ದಾರೆ ಎನ್ನಲಾದ ಸುದ್ದಿ ಹರಿದಾಡಲು ಆರಂಭಗೊಂಡ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯ ವೇಳೆಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಡಿಕೆಶಿಯನ್ನು ಭೇಟಿ ಮಾಡಲು ರಾಹುಲ್ ಗಾಂಧಿ ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಭೇಟಿಗೆ ಅವಕಾಶ ನೀಡದೇ ಇದ್ದಲ್ಲಿ ಆಸ್ಪತ್ರೆಯ ಮುಂಭಾಗವೇ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಆರೋಪ ಮಾಡಿ ಹೋರಾಟ ಆರಂಭಿಸಲು ರಾಹುಲ್ ಗಾಂಧಿ ಮುಂದಾಗಿದ್ದರು.

ವಿಫಲವಾಗಿದ್ದು ಹೇಗೆ?
ಡಿಕೆಶಿಯನ್ನು ಪರಿಶೀಲಿಸಿದ ವೈದ್ಯರ ಪೈಕಿ ಒಬ್ಬರು ಈಗ ನ್ಯಾಯಾಲಯಕ್ಕೆ ಹಾಜರು ಪಡಿಸುವುದು ಬೇಡ ಎಂದಿದ್ದರೆ ಮತ್ತೊಬ್ಬ ವೈದ್ಯರು ಮಧ್ಯಾಹ್ನದ ವೇಳೆಗೆ ಆರೋಗ್ಯ ಸುಧಾರಣೆಯಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಬಹುದು ಎಂದು ಇಡಿ ಅಧಿಕಾರಿಗಳಿಗೆ ಹೇಳಿದ್ದರಂತೆ. ವೈದ್ಯರು ಅನುಮತಿ ನೀಡಿದ ಬೆನ್ನಲ್ಲೇ ಇಡಿ ಅಧಿಕಾರಿಗಳು ಮಧ್ಯಾಹ್ನ 3.20ಕ್ಕೆ ನ್ಯಾಯಾಲಯಕ್ಕೆ ಡಿಕೆಶಿಯನ್ನು ಹಾಜರು ಪಡಿಸಿದ್ದಾರೆ. ಒಂದು ವೇಳೆ 45 ನಿಮಿಷ ತಡವಾಗಿದ್ದರೆ ಆಸ್ಪತ್ರೆಯಲ್ಲೇ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಹೈಡ್ರಾಮಾವೇ ಸೃಷ್ಟಿಯಾಗುವ ಸಾಧ್ಯತೆ ಇತ್ತು.

ಕೋರ್ಟಿನಲ್ಲೂ ಪ್ರಸ್ತಾಪ:
ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವಿಚಾರದಲ್ಲಿ ಗೊಂದಲವಾಗಿದ್ದನ್ನು ವಕೀಲ ಅಭಿಷೇಕ್ ಮನು ಸಿಂಘ್ವಿ ವಿಚಾರಣೆ ವೇಳೆ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಒಮ್ಮೆ ಮಧ್ಯಾಹ್ನ 12 ಗಂಟೆಗೆ ಹಾಜರು ಪಡಿಸುವುದಾಗಿ ಹೇಳಿ ನಂತರ 2 ಗಂಟೆ ಈಗ ಸಂಜೆ 4 ಗಂಟೆಗೆ ಹಾಜರು ಪಡಿಸಲಾಗಿದೆ ಎಂದು ಆರೋಪ ವ್ಯಕ್ತಪಡಿಸಿದ್ದರು.

ನ್ಯಾಯಾಲಯಕ್ಕೆ ಯಾವುದೇ ಕ್ಷಣದಲ್ಲಿ ಕರೆ ತರಬಹುದು ಎನ್ನುವ ಕಾರಣಕ್ಕೆ ಡಿಕೆಶಿ ಪರ ವಕೀಲರು ಬೆಳಗ್ಗೆಯಿಂದಲೇ ಕೋರ್ಟ್ ಆವರಣದಲ್ಲಿ ಕಾದು ಕುಳಿತಿದ್ದರು. ಆದರೆ ರೋಸ್ ಅವೆನ್ಯೂ ನ್ಯಾಯಾಲಯದ ಕೊಠಡಿ ಸಂಖ್ಯೆ 502ರಲ್ಲಿ ಮಧ್ಯಾಹ್ನದವರೆಗೆ ವಿಚಾರಣೆ ನಡೆಯಲಿಲ್ಲ. ಮಧ್ಯಾಹ್ನ 2 ಗಂಟೆಯ ವೇಳೆಗೆ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *