ನವದೆಹಲಿ: ಹೈ ಬಿಪಿ, ಶುಗರ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇಡಿ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಭಾನುವಾರ ಇಸಿಜಿ ಬಳಿಕ ಹೃದ್ರೋಗ ನಿಗಾ ಘಟಕಕ್ಕೆ ಡಿಕೆಶಿವಕುಮಾರ್ ಅವರನ್ನ ಶಿಫ್ಟ್ ಮಾಡಲಾಗಿತ್ತು.
ಇಡಿ ಅಧಿಕಾರಿಗಳ ಮಾನಸಿಕ ಕಿರುಕುಳದಿಂದ ಡಿಕಶಿಯವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಡಿಕೆ ಶಿವಕುಮಾರ್ ನಿದ್ದೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು ಅಧಿಕಾರಿಗಳು ನಿರಂತರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ನಿದ್ದೆ ಕೊರತೆ, ವಿಚಾರಣೆಯ ಒತ್ತಡದಿಂದ ಆರೋಗ್ಯದಲ್ಲಿ ಏರಿಳಿತ ಆಗುತ್ತಿದೆ ಎಂದು ಡಿಕೆ ಶಿವಕುಮಾರ್ ಆಪ್ತರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಡಿ.ಕೆ.ಶಿವಕುಮಾರ್ ಕಸ್ಟಡಿ ಅಂತ್ಯವಾಗಲಿದೆ. ಇತ್ತ ನ್ಯಾಯಾಲಯ ಜಾಮೀನು ಅರ್ಜಿಗೆ ಸೋಮವಾರ ಆಕ್ಷೇಪ ಸಲ್ಲಿಸುವಂತೆ ಸೂಚಿಸಿದೆ. ಇಂದು ಸಹ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದಲ್ಲಿ ವಿಚಾರಣೆ ಸ್ಥಗಿತಗೊಳ್ಳಲಿದೆ. ಇತ್ತ ಆನಾರೋಗ್ಯದ ಕಾರಣಗಳನ್ನ ನೀಡಿ ಡಿಕೆಶಿ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇತ್ತ ಇಡಿ ಪರ ವಕೀಲರು ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚಾರಣೆ ಪೂರ್ಣವಾಗಿಲ್ಲ, ಮತ್ತೆ ಡಿಕೆಶಿಯವರನ್ನು ನಮ್ಮ ವಶಕ್ಕೆ ನೀಡಬೇಕೆಂದು ಮನವಿ ಸಲ್ಲಿಸಿ, ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸುವ ಸಾಧ್ಯತೆಗಳಿವೆ.