ಮಧ್ಯಪ್ರದೇಶ ಬಿಕ್ಕಟ್ಟು, ಹೈಕಮಾಂಡಿಗೆ ಇಕ್ಕಟ್ಟು – ಡಿಕೆಶಿಗೆ ಸಿಕ್ತು ಕೆಪಿಸಿಸಿ ಪಟ್ಟ

Public TV
2 Min Read

ಬೆಂಗಳೂರು: ಮೂರು ತಿಂಗಳಿನಿಂದ ಖಾಲಿಯಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೊನೆಗೂ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದೆ. ಹಲವು ಬಾರಿ ನಾಯಕರ ಜೊತೆ ಮಾತುಕತೆ ನಡೆದರೂ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದ ಹೈಕಮಾಂಡ್ ಇಂದು ತನ್ನ ನಿರ್ಧಾರ ಪ್ರಕಟಿಸಿ ಖಾಲಿಯಿದ್ದ ಸ್ಥಾನವನ್ನು ಭರ್ತಿಮಾಡಿದೆ.

ಡಿಸೆಂಬರ್ 9 ರಂದು ಕರ್ನಾಟಕ ಉಪಚುನಾವಣೆಯ ಫಲಿತಾಂಶ ಬಂದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರೆ ವಿಪಕ್ಷ ನಾಯಕನ ಹುದ್ದೆ ಮತ್ತು ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು.

ಗುಂಡೂರಾವ್ ರಾಜೀನಾಮೆಯ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಎಂಬಿ ಪಾಟೀಲ್, ಪರಮೇಶ್ವರ್ ಹೆಸರು ತೇಲಿ ಬಂದಿತ್ತು. ಆದರೆ ಅಂತಿಮವಾಗಿ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟವನ್ನು ನೀಡಿದೆ. ದಿಢೀರ್ ಆಗಿ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಳ್ಳಲು ಮಧ್ಯಪ್ರದೇಶ ಬಿಕ್ಕಟ್ಟು ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಹೌದು, ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರದ ವಿರುದ್ಧ ಬಂಡೆದ್ದ ಜ್ಯೋತಿರಾದಿತ್ಯ ಸಿಂಧಿಯಾ ಈಗ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಒಂದೊಂದೆ ರಾಜ್ಯಗಳು ಕಾಂಗ್ರೆಸ್ಸಿನಿಂದ ಕೈ ಜಾರುತ್ತಿದ್ದಂತೆ ಎಚ್ಚೆತ್ತ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಿದೆ.

ಕಾಂಗ್ರೆಸ್ ಪಕ್ಷ ಸಂಘಟಿಸಲು ನಾಯಕರು ಬೇಕು. ಆದರೆ ಪಕ್ಷದಲ್ಲಿ ಉನ್ನತ ಸ್ಥಾನಗಳು ಹೈಕಮಾಂಡ್ ಆಪ್ತರಿಗೆ ಮಾತ್ರ ಸಿಗುತ್ತದೆ ಎನ್ನುವುದು ಈ ಹಿಂದಿನಿಂದಲೂ ಬಂದಂತಹ ಮಾತು. ಲೋಕಸಭೆ ಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸೋತ ಬಳಿಕ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಹೈಕಮಾಂಡ್ ಈ ಹುದ್ದೆ ನೀಡಿರಲಿಲ್ಲ. ನಂತರ ರಾಜ್ಯಸಭೆಯ ಆಯ್ಕೆಯನ್ನು ಬಯಸಿದ್ದರು. ಆದರೆ ದಿಗ್ವಿಜಯ್ ಸಿಂಗ್ ಮತ್ತು ಕಮಲನಾಥ್ ಸಿಂಧಿಯಾ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವುದು ಬೇಡ ಎಂದು ಹೈಕಮಾಂಡ್ ಮುಂದೆ ಹೇಳಿದ್ದರಂತೆ. ಹೈಕಮಾಂಡ್ ಸಿಂಧಿಯಾಗೆ ಯಾವುದೇ ಸ್ಥಾನಮಾನ ನೀಡದ ಪರಿಣಾಮ ಮಧ್ಯಪ್ರದೇಶಲ್ಲಿ ಕಮಲನಾಥ್ ಸರ್ಕಾರ ಈಗ ಅಲ್ಪಮತಕ್ಕೆ ಕುಸಿದಿದೆ.

ಮಧ್ಯಪ್ರದೇಶದ ಬಂಡಾಯ ಶಾಸಕರು ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿರುವಾಗ ಹೈಕಮಾಂಡ್ ರಾಜ್ಯ ನಾಯಕರನ್ನು ಸಂಪರ್ಕಿಸಿ ಸಂಧಾನ ಮಾಡಲು ಹೋಗಿ ಜೊತೆಗೆ ರೆಸಾರ್ಟ್ ಮುಂದೆ ಪ್ರತಿಭಟನೆ ನಡೆಸಿ ಎಂದು ಹೇಳಿತ್ತು. ಆದರೆ ರಾಜ್ಯದ ಯಾವೊಬ್ಬ ನಾಯಕರು ಹೈಕಮಾಂಡ್ ಆದೇಶವನ್ನು ಪಾಲನೆ ಮಾಡಲು ಒಪ್ಪಲಿಲ್ಲ ಎನ್ನಲಾಗುತ್ತಿದೆ.

ಅಹಮದ್ ಪಟೇಲ್ ಅವರು ಸ್ಪರ್ಧಿಸಿದ್ದ ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಗುಜರಾತ್ ಶಾಸಕರನ್ನು ಶಿವಕುಮಾರ್ ಬಿಡದಿಯ ಈಗಲ್‍ಟನ್ ರೆಸಾರ್ಟಿನಲ್ಲಿ ರಕ್ಷಿಸಿದ್ದರು. ಈ ಸಮಯದಲ್ಲೇ ಆದಾಯ ತೆರಿಗೆ ದಾಳಿ ನಡೆದಿತ್ತು. ಹೀಗಾಗಿ ನಮಗೆ ಯಾಕೆ ಈ ರಿಸ್ಕ್ ಎಂದು ಯೋಚಿಸಿ ಕಲಾಪದಲ್ಲಿ ಭಾಗಿಯಾಗಿದ್ದರು

ಡಿಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಸಂಪರ್ಕಿಸಿ ಮುಂಬೈನಲ್ಲಿ ಕರ್ನಾಟಕ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಂತೆ ಇಲ್ಲೂ ಮಾಡಿ ಎಂದಾಗ ಡಿಕೆಶಿ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದರಂತೆ.

ಮಧ್ಯಪ್ರದೇಶ ಶಾಸಕರ ಬಳಿ ತೆರಳಲು ಯಾರೂ ಆಸಕ್ತಿ ತೋರದೇ ಇದ್ದಾಗ ಹೈಕಮಾಂಡಿಗೆ ಒಂದು ವಿಚಾರ ಸ್ಪಷ್ಟವಾಯಿತು. ಸದ್ಯ ಕರ್ನಾಟಕ ಕಾಂಗ್ರೆಸ್ಸಿಗೆ ಮುಖ್ಯಸ್ಥರು ಯಾರು ಇಲ್ಲ. ಮುಖ್ಯಸ್ಥರು ಇಲ್ಲದೆ ಇದ್ದಾಗ ಯಾರೂ ಜವಾಬ್ದಾರಿ ವಹಿಸಲು ಆಸಕ್ತಿ ವಹಿಸುವುದಿಲ್ಲ ಎನ್ನುವುದು ಹೈಕಮಾಂಡಿಗೆ ಗೊತ್ತಾಗಿದೆ. ಅಷ್ಟೇ ಅಲ್ಲದೇ ಹೀಗೆ ದಿನ ದೂಡಿದರೆ ಕರ್ನಾಟಕದಲ್ಲೂ ಕಾಂಗ್ರೆಸ್ಸಿಗೆ ಹಿನ್ನಡೆಯಾಗಬಹುದು ಎಂಬುದನ್ನು ಅರಿತ ಕಾಂಗ್ರೆಸ್ ಮಧ್ಯಪ್ರದೇಶದ ಬಿಕ್ಕಟ್ಟಿನಿಂದ ಎಚ್ಚೆತ್ತು ದಿಢೀರ್ ಆಗಿ ಅಧ್ಯಕ್ಷ ಸ್ಥಾನವನ್ನು ನೇಮಕ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *