Ballari Clash | ಕಾಂಗ್ರೆಸ್‌ ಕಾರ್ಯಕರ್ತನ ಕೊಲೆಗೆ ಬಿಜೆಪಿಯೇ ಕಾರಣ – ಡಿಕೆಶಿ

2 Min Read

– ನಮ್ಮ ಪಕ್ಷ ಭರತ್‌ ರೆಡ್ಡಿ ಪರ ನಿಲ್ಲಲಿದೆ ಎಂದ ಡಿಸಿಎಂ

ಬೆಂಗಳೂರು/ಬಳ್ಳಾರಿ: ನಗರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತನ (Congress Worker) ಕೊಲೆಗೆ ಬಿಜೆಪಿಯೇ ಕಾರಣ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ನೇರ ಆರೋಪ ಮಾಡಿದರು. ಅಲ್ಲದೇ ನಮ್ಮ ಪಕ್ಷ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಪರ ನಿಲ್ಲಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನು ನಮ್ಮ ಶಾಸಕನ ಪರ ನಿಲ್ತೀನಿ ಅಂತ ಭರತ್ ರೆಡ್ಡಿ (Bharath Reddy) ಪರ ಬ್ಯಾಟ್‌ ಬೀಸಿದರು. ಇದನ್ನೂ ಓದಿ: ಬಳ್ಳಾರಿ ಎಸ್‌ಪಿ ಪವನ್‌ ನಿಜ್ಜೂರ್‌ ಆತ್ಮಹತ್ಯೆಗೆ ಯತ್ನಿಸಿಲ್ಲ, ವಿಶ್ರಾಂತಿಯಲ್ಲಿದ್ದಾರೆ: ಡಿಸಿಪಿ ಶ್ರೀಹರಿಬಾಬು

ಯಾರದ್ದೋ ಮನೆ ಮುಂದೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ರೆ ಎನು ಸಮಸ್ಯೆ? ನಮ್ಮ ಮನೆ ಮುಂದೆ, ಸಿಎಂ ಮನೆ ಮುಂದೆ ಬಿಜೆಪಿಯವರು (BJP) ಬ್ಯಾನರ್ ಹಾಕ್ತಾರೆ. ಅದು ಸಾರ್ವಜನಿಕ ರಸ್ತೆ. ಸಂಭ್ರಮದಿಂದ ಕಾರ್ಯಕ್ರಮ ಮಾಡಲು ನಾವು ಬ್ಯಾನರ್ ಹಾಕಿದ್ದು ಅಷ್ಟೇ. ಈ ಘಟನೆಯಿಂದ ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ ಇದಕ್ಕೆ ಬಿಜೆಪಿ ಕಾರಣ ಅಂತ ಆರೋಪ ಮಾಡಿದ್ರು.

ಜನಾರ್ದನ ರೆಡ್ಡಿ ಬಂದ್ಮೇಲೆ ಗಲಾಟೆ ಶುರುವಾಗಿದೆ
ಕಳೆದ ಲೋಕಸಭಾ, ವಿಧಾನಸಭೆಯ ಸೋಲನ್ನು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗ್ತಾ ಇಲ್ಲ. ಬಳ್ಳಾರಿಗೆ ಜನಾರ್ದನ ರೆಡ್ಡಿ ಬರುವ ತನಕ ಒಂದು ಗಲಾಟೆ ಆಗಿರಲಿಲ್ಲ. ಈಗ ಶುರುವಾಗಿದೆ. ನಮ್ಮ ಶಾಸಕ ಗಲಾಟೆ ಕಂಟ್ರೋಲ್ ಮಾಡಲು ಹೋಗಿದ್ದರು. ನಾನು ನಮ್ಮ ಶಾಸಕರ ಪರ ನಿಲ್ತೀನಿ ಅಂತ ಭರತ್ ರೆಡ್ಡಿ ಪರ ಮಾತಾಡಿದ್ರು. ಇದನ್ನೂ ಓದಿ: ಪವನ್‌ ನಿಜ್ಜೂರು ಅಮಾನತು – ಬ್ಯಾನರ್‌ ಗಲಾಟೆಯಾದಾಗ ಪಾರ್ಟಿ ಮೂಡ್‌ನಲ್ಲಿದ್ದ ಬಳ್ಳಾರಿ ಎಸ್‌ಪಿ!

ಬೆಂಕಿ ಹಚ್ಚುತ್ತಿದ್ದೆ ಅನ್ನೋ ಭರತ್ ರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಹೋಗ್ತಾರೆ ಬೆಂಕಿ ಹಚ್ಚಲು..? ಅವರು ಹೇಳಿದ್ದು ಗೊತ್ತಿಲ್ಲ ನೋಡ್ತೀನಿ ಅಂತ ಭರತ್ ರೆಡ್ಡಿ ಹೇಳಿಕೆಗೆ ಹಾರಿಕೆ ಉತ್ತರ ಕೊಟ್ಟರು. ಜನಾರ್ದನ ರೆಡ್ಡಿ ಕೊಲೆಗೆ ಸಂಚು ಅನ್ನೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವೆಲ್ಲಾ ಸುಳ್ಳು. ಕೋಟೆ ಕಟ್ಟಿಕೊಂಡು ಕುಳಿತಿದ್ದಾರೆ. ಯಾರು ಕೊಲೆ ಮಾಡ್ತಾರೆ? ನೂರು ಜನ ಸೆಕ್ಯುರಿಟಿ ಇಟ್ಕೊಂಡಿದ್ದಾರೆ ಅದೆಲ್ಲಾ ಡ್ರಾಮಾ. ಜನರಿಗೆ ಇವರಿಂದ ಭಯ ಇದೆ ಅಂತ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಘಟನೆ ಆದಾಗ ಶ್ರೀರಾಮುಲು ಕೂಡ ಫೋನ್‌ ಮಾಡಿದ್ರು. ಎಸ್‌ಪಿಗೆ ನಾನೇ ಮಾತಾಡಿದೆ. ನಮಗೂ ಜವಾಬ್ದಾರಿ ಇದೆ. ಒಬ್ಬ ಕೆಪಿಸಿಸಿ ಅಧ್ಯಕ್ಷ ಆಗಿಯೂ ಜವಾಬ್ದಾರಿ ಇದೆ ಎಂದರು. ನ್ಯಾಯಾಂಗ ತನಿಖೆಗೆ ಬಿಜೆಪಿ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ತನ್ನ ಕೆಲಸ ಮಾಡಲಿದೆ ಎಂದರು. ಗುಂಡು ಹಾರಿಸಿದ್ದು ಸರಿನಾ ಎಂಬ ಪ್ರಶ್ನೆಗೆ ತನಿಖೆ ಆಗ್ತಾ ಇದೆ ಉತ್ತರ ಸಿಗಲಿದೆ. ಅದಕ್ಕೆ ನಾವು ತನಿಖಾ ವರದಿ ಬರಲಿ ಅಂದಿರೋದು ಎಂದರು. ಇದನ್ನೂ ಓದಿ: ಬಳ್ಳಾರಿ ಗಲಾಟೆ ವೇಳೆ ಫೈರಿಂಗ್ ಕೇಸ್ – ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್‌ಗಳು ನಾಪತ್ತೆ

Share This Article