ಕುದ್ರೋಳಿಯಲ್ಲಿ ದೀಪಾವಳಿ ಸಂಭ್ರಮ- ಎಲ್ಲರನ್ನೂ ಆಕರ್ಷಿಸಿದ ಗೂಡುದೀಪದ ಕಾರ್ಯಕ್ರಮ

Public TV
2 Min Read

ಮಂಗಳೂರು: ದೀಪಾವಳಿ (Deepavali) ಬಂತೆಂದರೆ ತುಳುನಾಡಿನ ಮನೆಮುಂದೆಲ್ಲಾ ಬೆಳಗುತ್ತಿದ್ದ ಗೂಡುದೀಪಗಳು(ಆಕಾಶಬುಟ್ಟಿ) ಇಂದು ಆ ದೇವಸ್ಥಾನದ ಮುಂದೆಯೂ ಸಹಸ್ರಾರು ಸಂಖ್ಯೆಯಲ್ಲಿ ಕಂಗೊಳಿಸುತ್ತಿತ್ತು. ಒಂದನ್ನೊಂದು ಮೀರಿಸುವ ಆ ಗೂಡುದೀಪಗಳು ಜನರನ್ನು ತನ್ನತ್ತ ಸೆಳೆಯುತ್ತಿತ್ತು. ಗೂಡುದೀಪಗಳ ತಯಾರಕರಂತೂ ನನ್ನ ಗೂಡುದೀಪ ಚೆನ್ನಾಗಿದೆ ಎಂದು ಮೀಸೆ ತಿರುಗಿಸುತ್ತಿದ್ದರು.

ವಾವ್.. ಒಂದಕ್ಕಿಂತ ಒಂದು ಚೆಂದ. ಈ ರೀತಿ ಸುಂದರವಾಗಿ ಕಂಗೊಳಿಸುತ್ತಿರುವ ಇಂತಹ ಗೂಡುದೀಪಗಳು ಹಿಂದಿನ ಕಾಲದಲ್ಲಿ ತುಳುನಾಡಿನ ಪ್ರತೀ ಮನೆ ಮುಂದೆಯೂ ಇತ್ತು. ಮನೆ ಮಂದಿಯೆಲ್ಲಾ ಸೇರಿ ಇಂತಹ ಸುಂದರವಾದ ಗೂಡುದೀಪಗಳನ್ನು ತಯಾರಿಸುತ್ತಿದ್ದರು. ದೀಪಗಳ ಜೊತೆಗೆ ಈ ಗೂಡುದೀಪವೂ ಮೆರುಗು ನೀಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆಲ್ಲ ಯಾರಿಗೂ ಪುರುಸೋತ್ತಿಲ್ಲದೆ, ಕೆಲವರು ಅಂಗಡಿಗಳಲ್ಲಿ ಸಿಗುವ ರೆಡಿಮೆಡ್ ಗೂಡುದೀಪಗಳನ್ನು ತಂದರೆ, ಇನ್ನು ಕೆಲವರು ಗೂಡುದೀಪಗಳನ್ನು ಹಾಕುವ ಸಂಪ್ರದಾಯವನ್ನೇ ಮರೆತಿದ್ದಾರೆ. ಹೀಗಾಗಿ ಈ ಗೂಡುದೀಪಗಳು ಇನ್ನೂ ಉಳಿಯಬೇಕು ಜೊತೆಗೆ ಯುವಕರಲ್ಲೂ ಈ ಗೂಡುದೀಪ (Gududeepa) ಗಳ ಬಗ್ಗೆ ಆಸಕ್ತಿ ಬರಬೇಕು ಅನ್ನುವ ನಿಟ್ಟಿನಲ್ಲಿ ಮಂಗಳೂರಿನ ಸ್ಥಳೀಯ ಸುದ್ದಿವಾಹಿನಿ ಕಳೆದ 20 ವರ್ಷಗಳಿಂದ ಗೂಡುದೀಪ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವಠಾರದಲ್ಲಿ ಕ್ಷೇತ್ರದ ಸಹಯೋಗದೊಂದಿಗೆ ಈ ಗೂಡುದೀಪ ಸ್ಫರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಸ್ಪರ್ಧೆ 3 ವಿಭಾಗಳಾದ ಸಾಂಪ್ರದಾಯಿಕ, ಆಧುನಿಕ ಹಾಗೂ ಮೋಡೆಲ್ ವಿಭಾಗದಲ್ಲಿ ನಡೆಯುತ್ತಿದ್ದು ಎಲ್ಲರಿಗೂ ಮುಕ್ತ ಅವಕಾಶ ಇದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಿಂದ ಸ್ಪರ್ಧಾಳುಗಳು ತಮ್ಮ ಗೂಡು ದೀಪಗಳೊಂದಿಗೆ ಬಂದು ಇಲ್ಲಿ ಪ್ರದರ್ಶನಕ್ಕಿಡುತ್ತಾರೆ. ಇಲ್ಲಿರುವ ಪ್ರತಿಯೊಂದು ಗೂಡುದೀಪವೂ ವಿಭಿನ್ನವಾಗಿದೆ. ದಿನ ಬಳಕೆಯ ವಸ್ತುಗಳು ಕಲಾಕಾರನ ಕೈಯಲ್ಲಿ ಜೀವ ಪಡೆದಿದೆ. ಕಾಂತಾರ ಚಿತ್ರದ ಶೈಲಿಯ ಗೂಡುದೀಪ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಇದನ್ನೂ ಓದಿ: ಬ್ರಿಟನ್ ಪ್ರಧಾನಿಯಾದ ಗಂಟೆಗಳೊಳಗೆ ಸುನಾಕ್ ಹೊಸ ಕ್ಯಾಬಿನೆಟ್‌ಗೆ ಸಿದ್ಧತೆ

ಈ ಗೂಡದೀಪ ಸ್ಫರ್ಧೆಯನ್ನು ನೋಡಿದವರಂತು ನಾವು ಮುಂದಿನ ದಿನಗಳಲ್ಲಿ ಗೂಡುದೀಪಗಳನ್ನು ತಯಾರಿಸಬೇಕೆಂದರು. ಈ ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರೆ, ಮೂರು ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಚಿನ್ನದ ಪದಕ ನೀಡಲಾಯಿತು. ಒಟ್ಟಿನಲ್ಲಿ ಅವನತಿಯತ್ತ ಸಾಗುತ್ತಿರುವ ಈ ಗೂಡುದೀಪಗಳನ್ನು ಈ ರೀತಿಯ ಸ್ಪರ್ಧೆ ಮಾಡಿಯಾದರೂ ಉಳಿಸಿಕೊಳ್ಳಬೇಕೆನ್ನುವ ಸಂಘಟಕರ ಪ್ರಯತ್ನಕ್ಕೆ ಎಲ್ಲರೂ ಸೈ ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *