ವಿಡಿಯೋ: ವೈಟ್ ಹೌಸ್‍ ನಲ್ಲಿ ದೀಪಾವಳಿ ಆಚರಿಸಿದ ಟ್ರಂಪ್

Public TV
2 Min Read

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತ ಭವನದಲ್ಲಿ ದೀಪಾವಳಿಯನ್ನು ಆಚರಿಸುವ ಮೂಲಕ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಶುರು ಮಾಡಿದ್ದ ಸಂಪ್ರದಾಯವನ್ನ ಮುಂದುವರೆಸಿದ್ದಾರೆ.

ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿ ವಿಡಿಯೋ ಸಂದೇಶವೊಂದನ್ನ ಟ್ರಂಪ್ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಿಂದೂ ಧರ್ಮದ ದೀಪಗಳ ಹಬ್ಬದ ಮಹತ್ವವನ್ನು ತಿಳಿಸುವುದರ ಜೊತೆಗೆ ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ದೀಪಾವಳಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಹೊಸ ವರ್ಷಕ್ಕಾಗಿ ಶಾಂತಿ ಮತ್ತು ಸಮೃದ್ಧಿಯ ಸಮಯ. ಈ ಸಂಪ್ರದಾಯಿಕ ಹಬ್ಬವನ್ನು ಜಗತ್ತಿನಾದ್ಯಂತ 100 ಕೋಟಿಗೂ ಅಧಿಕ ಹಿಂದೂಗಳು ಆಚರಿಸುತ್ತಾರೆ. ಅಮೆರಿಕದಲ್ಲಿ 20 ಲಕ್ಷಕ್ಕೂ ಅಧಿಕ ಹಿಂದೂಗಳು ದೀಪಾವಳಿಯನ್ನ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಕೇವಲ ಹಿಂದೂಗಳು ಅಲ್ಲದೇ ಬುದ್ಧ, ಜೈನ್, ಸಿಖ್ ಧರ್ಮದವರು ಅಮೆರಿಕ, ಭಾರತ ಹಾಗೂ ಜಗತ್ತಿನಾದ್ಯಂತ ದೀಪಾವಳಿ ಆಚರಿಸುತ್ತಾರೆ ಅಂತಾ ಹೇಳಿದರು.

ವಿಶೇಷವಾಗಿ ಭಾರತ ಮತ್ತು ಭಾರತೀಯ ಸಂವಿಧಾನದ ಬಗ್ಗೆ ಮಾತನಾಡಿದ ಟ್ರಂಪ್, ಹಿಂದೂ ಧರ್ಮದ ನೆಲವಾದ ಹಾಗೂ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವುಳ್ಳ ಭಾರತವನ್ನು ನಾವು ವಿಶೇಷವಾಗಿ ನೆನಪಿಸಿಕೊಳ್ಳುತ್ತೇವೆ ಅಂತ ಹೇಳಿದ್ರು.

ಒಬಾಮಾ ಬರೆದ ಮುನ್ನುಡಿ: ಶ್ವೇತ ಭವನದಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ದೀಪ ಬೆಳಗಿಸೋ ಮೂಲಕ ದೀಪಾವಳಿ ಆಚರಣೆಗೆ ಮುನ್ನುಡಿ ಬರೆದಿದ್ದರು. ಈ ಮೂಲಕ ವೈಟ್ ಹೌಸ್‍ನಲ್ಲಿ ದೀಪಾವಳಿ ಆಚರಿಸಿದ ಮೊದಲ ಅಮೆರಿಕ ಅಧ್ಯಕ್ಷ ಎನಿಸಿಕೊಂಡಿದ್ದರು. ಕಳೆದ ವರ್ಷ ದೀಪಾವಳಿ ಆಚರಿಸಿದ ವೇಳೆಯಲ್ಲಿ ಒಬಮಾ, ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಮೊದಲ ವ್ಯಕ್ತಿಯಾಗಿದ್ದಕ್ಕೆ ನನಗೆ ಹೆಮ್ಮೆಯಾಗುತ್ತದೆ. ಒಂದು ದೀಪದ ಬೆಳಕು ಹೇಗೆ ಅಂಧಕಾರವನ್ನು ಹೋಗಲಾಡಿಸುತ್ತದೆ ಎಂಬುದು ದೀಪಾವಳಿಯ ಸಂಕೇತವಾಗಿದೆ. ಈ ಸಂಪ್ರದಾಯವನ್ನು ಮುಂಬರುವ ಅಧ್ಯಕ್ಷರು ಮುಂದುವರೆಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.

2009ರಿಂದ ದೀಪಾವಳಿಯನ್ನು ಶ್ವೇತ ಭವನದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಮೊದಲ ಅಧ್ಯಕ್ಷ ಎಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ. ಭಾರತೀಯರು ಮುಂಬೈನಲ್ಲಿ ದೀಪಾವಳಿಯಂದು ಮುಕ್ತ ಹೃದಯದಿಂದ ನಮ್ಮನ್ನು ಬರಮಾಡಿಕೊಂಡು, ನಮ್ಮದೊಂದಿಗೆ ಡ್ಯಾನ್ಸ್ ಕೂಡ ಮಾಡಿದ್ದನ್ನು ನಾನು ಹಾಗೂ ಮಿಶೆಲ್ ಎಂದಿಗೂ ಮರೆಯುವುದಿಲ್ಲ ಅಂತ ಹೇಳಿದ್ದರು.

https://www.facebook.com/POTUS44/posts/555043898018788:0

Share This Article
Leave a Comment

Leave a Reply

Your email address will not be published. Required fields are marked *