ದೀಪಾವಳಿ; ಸಂಭ್ರಮದ ಜೊತೆ ಇರಲಿ ಎಚ್ಚರ – ಪಟಾಕಿ ಹೊಡೆಯೋವಾಗ ಈ 10 ಸೇಫ್ಟಿ ಟಿಪ್ಸ್‌ ಫಾಲೋ ಮಾಡಿ

Public TV
4 Min Read

ಬೆಳಕಿನ ಹಬ್ಬ ದೀಪಾವಳಿ (Deepavali 2025) ಬರುತಿದೆ. ಬೆಳಕು ಜ್ಞಾನದ ಸಂಕೇತ. ನವೋಲ್ಲಾಸದ ಪ್ರತೀಕ. ಅಜ್ಞಾನದ ಕತ್ತಲಿನಿಂದ ಸುಜ್ಞಾನವೆಂಬ ಬೆಳಕಿನ ಕಡೆಗೆ ಸಾಗುವ ಮಾರ್ಗ. ಕೇಡಿನ ವಿರುದ್ಧ ಒಳಿತಿನ ವಿಜಯದ ಸಂಕೇತ. ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನ ಮತ್ತು ಸಂಪ್ರದಾಯ ಇದೆ. ಮನೆ ಮನೆಗಳಲ್ಲಿ ಹಣತೆಗಳು ಬೆಳಗುತ್ತವೆ. ನಮ್ಮೊಳಗಿನ ಕೆಡುಕು, ಅಹಂ ಭಾವವು ದೀಪದ ಬತ್ತಿ ಇದ್ದಂತೆ. ಬೆಂಕಿ ಇಟ್ಟಾಗ ಕೇಡಿನ ಬತ್ತಿ ಸುಟ್ಟು ಹೋದಂತೆ ನಮ್ಮಲ್ಲಿ ಜ್ಞಾನದ ಬೆಳಕು ಹೊಮ್ಮುತ್ತದೆ. ಮನೆಗಳಷ್ಟೇ ಅಲ್ಲ ಮನಸ್ಸುಗಳು ಬೆಳಗಿದಾಗ ಈ ಹಬ್ಬಕ್ಕೊಂದು ಅರ್ಥ ಬರುತ್ತದೆ.

ಕಾಲ ಬದಲಾದಂತೆ ಆಧುನಿಕತೆ ಬೆಳೆದಂತೆ ದೀಪಾವಳಿ ಆಚರಣೆಯಲ್ಲೂ ಹೊಸತನ ಬಂದಿದೆ. ಹಿಂದೆಲ್ಲ ಮನೆಗಳಲ್ಲಿ ಹಣತೆಗಳನ್ನು ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು. ಈಗ ಆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ಬಂದಿದೆ. ತರಹೇವಾರಿ ಬೆಳಕು ಹೊಮ್ಮಿಸಿ ಚಿತ್ತಾರ ಮೂಡಿಸುವ ಪಟಾಕಿ ಸಿಡಿಸಿ ಹಬ್ಬ ಆಚರಿಸಲಾಗುತ್ತದೆ. ಪಟಾಕಿ ಹೊಡೆದು ಆಚರಿಸುವ ದೀಪಾವಳಿ ಸಂತೋಷ, ಬೆಳಕು ಮತ್ತು ನಗುವನ್ನು ತರುತ್ತದೆ. ಜೊತೆಗೆ ಎಚ್ಚರಿಕೆಯನ್ನೂ ಸಹ ಬಯಸುತ್ತದೆ. ಪ್ರತಿ ವರ್ಷ, ಅಜಾಗರೂಕತೆ ಮತ್ತು ಅರಿವಿನ ಕೊರತೆಯಿಂದಾಗಿ ಸಾವಿರಾರು ಪಟಾಕಿ ಸಂಬಂಧಿತ ಅವಘಡಗಳು ಸಂಭವಿಸುತ್ತವೆ. ಈ ದೀಪಾವಳಿ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಶಾಂತಿಯುತವಾಗಿಡಲು ಮತ್ತು ನಿಮ್ಮ ಹಬ್ಬವನ್ನು ನಿಜವಾಗಿಯೂ ಪ್ರಕಾಶಮಾನವಾಗಿಡಲು ಒಂದಷ್ಟು ಟಿಪ್ಸ್‌ಗಳಿವೆ. ಇದನ್ನೂ ಓದಿ: ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

1.ಪಟಾಕಿಗಳನ್ನು ಬುದ್ಧಿವಂತಿಕೆಯಿಂದ ಆರಿಸಿ
ದೀಪಾವಳಿ ಅಂದ್ರೆ ಪಟಾಕಿ ಅನ್ನೋ ಕಾಲ ಇದು. ಎಲ್ಲೆಡೆ ಪಟಾಕಿಗಳ ಸದ್ದು ಕೇಳಿಬರುತ್ತದೆ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬೇಕು ಎನ್ನುವವರು ಪರವಾನಗಿ ಪಡೆದ ಅಂಗಡಿಗಳಿಂದ ಮಾತ್ರ ಪಟಾಕಿಗಳನ್ನು ಖರೀದಿಸಿ. ಸ್ಥಳೀಯವಾಗಿ ತಯಾರಿಸಿದ ಅಥವಾ ಲೇಬಲ್ ಇಲ್ಲದ, ಅಸುರಕ್ಷಿತ ಅಥವಾ ಕಾನೂನುಬಾಹಿರ ಪಟಾಕಿಗಳನ್ನು ಖರೀದಿಸಬೇಡಿ. ಸರಿಯಾದ ಸುರಕ್ಷತಾ ಸೂಚನೆಗಳು ಮತ್ತು ಉತ್ಪಾದನಾ ವಿವರಗಳಿರುವ ಪ್ಯಾಕೇಜಿಂಗ್ ಪಟಾಕಿಗಳು ಆಯ್ಕೆ ಒಳ್ಳೆಯದು.

2.ಸುರಕ್ಷಿತ ಉಡುಪುಗಳನ್ನು ಧರಿಸಿ
ಪಟಾಕಿಗಳನ್ನು ಹಚ್ಚುವಾಗ ಸಡಿಲವಾದ, ಸಿಂಥೆಟಿಕ್ ಅಥವಾ ಹರಿಯುವ ಬಟ್ಟೆಗಳನ್ನು ಕೈಬಿಡಿ. ಬೆಂಕಿ ತಾಗಿದರೆ ಅಂತಹ ಬಟ್ಟೆಗಳು ಸುಲಭವಾಗಿ ಹೊತ್ತಿಕೊಳ್ಳಬಹುದು. ಬೆಂಕಿಯಿಂದ ಹೆಚ್ಚು ಹಾನಿಗೊಳಗಾಗದ ಹತ್ತಿ ಅಥವಾ ನೈಸರ್ಗಿಕ ಬಟ್ಟೆಗಳನ್ನು ಧರಿಸಿ. ನಿಮ್ಮ ಕೂದಲು ಉದ್ದವಾಗಿದ್ದರೆ ಅದನ್ನು ಹಿಂದಕ್ಕೆ ಕಟ್ಟಿಕೊಳ್ಳಿ.

3.ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ
ಪಟಾಕಿ ಹೊಡೆಯುವಾಗ ಉತ್ಸಾಹ, ಹುಮ್ಮಸ್ಸು ಸ್ವಲ್ಪ ಹೆಚ್ಚೇ ಇರುತ್ತದೆ. ಆಗಂತ ಎಚ್ಚರಿಕೆ ತಪ್ಪಿ ಪಟಾಕಿ ಹಚ್ಚುವ ಕೆಲಸ ಮಾಡಬಾರದು. ಜನಸಂದಣಿ, ಮನೆಗಳು ಅಥವಾ ವಾಹನಗಳ ಹತ್ತಿರ ಎಂದಿಗೂ ಪಟಾಕಿಗಳನ್ನು ಹಚ್ಚಬೇಡಿ. ಕನಿಷ್ಠ 10-15 ಅಡಿಗಳಷ್ಟು ಸುರಕ್ಷಿತ ಅಂತರ ನಿಯಮವನ್ನು ಅನುಸರಿಸಿ. ನೀವು ಪಟಾಕಿಯನ್ನು ಹಚ್ಚುವ ಮೊದಲು ಸುತ್ತಮುತ್ತ ಹತ್ತಿರದಲ್ಲಿ ಯಾರಾದರು ಇದ್ದಾರೆಯೇ? ಇದ್ದರೆ ಪಟಾಕಿ ವಿಚಾರದಲ್ಲಿ ಜಾಗೃತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಇದನ್ನೂ ಓದಿ: ದೀಪಾವಳಿಗೆ ಬೆಳ್ಳಿ-ಬಂಗಾರ ಬಲು ಭಾರ – 10 ಗ್ರಾಂ ಚಿನ್ನ ಒಂದೂವರೆ ಲಕ್ಷಕ್ಕೆ ತಲುಪುತ್ತಾ?

4.ಪಟಾಕಿ ಹಚ್ಚಲು ಗಂಧದಕಡ್ಡಿ ಅಥವಾ ಲಾಂಗ್ ಸ್ಟಿಕ್ ಬಳಸಿ
ಪಟಾಕಿ ಹಚ್ಚಲು ಬೆಂಕಿಕಡ್ಡಿಗಳು ಅಥವಾ ಲೈಟರ್‌ಗಳನ್ನು ಎಂದಿಗೂ ಬಳಸಬೇಡಿ. ಮೇಣದಬತ್ತಿ, ಸ್ಪಾರ್ಕ್ಲರ್ ಅಥವಾ ಧೂಪದ್ರವ್ಯದ ಕಡ್ಡಿಯನ್ನು (ಗಂಧದಕಡ್ಡಿ) ಬಳಸಿ. ಪಟಾಕಿಯ ಫ್ಯೂಸ್ ಬೆಳಗಿದ ನಂತರ ಸುರಕ್ಷಿತವಾಗಿ ದೂರ ಹೋಗಲು ಈ ವಿಧಾನ ನಿಮಗೆ ಸಹಕಾರಿ. ಪಟಾಕಿ ಹಚ್ಚುವಾಗಲೇ ನೀವು ಸ್ವಲ್ಪ ದೂರ ನಿಲ್ಲುವುದರಿಂದ ಯಾವುದೇ ಅಪಾಯ ಇರಲ್ಲ.

5.ನೀರು ಮತ್ತು ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ಇಟ್ಟುಕೊಳ್ಳಿ
ತುರ್ತು ಸಂದರ್ಭಗಳನ್ನು ನಿಭಾಯಿಸಲು ಬಕೆಟ್‌ಗಳಲ್ಲಿ ನೀರು, ಮರಳಿನ ರಾಶಿ ಇಟ್ಟುಕೊಳ್ಳಿ. ಪಟಾಕಿಗಳಿಂದ ಹೆಚ್ಚಿನ ಬೆಂಕಿ ಹಾನಿ ತಪ್ಪಿಸಲು ಈ ಕ್ರಮ ಸಹಕಾರಿ. ಸಣ್ಣಪುಟ್ಟ ಸುಟ್ಟಗಾಯಗಳನ್ನು ತಕ್ಷಣವೇ ನಿರ್ವಹಿಸಲು ಪ್ರಥಮ ಚಿಕಿತ್ಸಾ ಕಿಟ್ ಅನ್ನು ಸಿದ್ಧವಾಗಿಡಿ.

6.ಮಕ್ಕಳು ಪಟಾಕಿ ಹೊಡೆಯುವಾಗ ನಿಗಾವಹಿಸಿ
ಮಕ್ಕಳು ಪಟಾಕಿ ಹೊಡೆಯುವಾಗ ದೊಡ್ಡವರು ನಿಗಾವಹಿಸಬೇಕು. ವಯಸ್ಕರು ಅವರಿಗೆ ಮಾರ್ಗದರ್ಶನ ನೀಡಬೇಕು. ಮಕ್ಕಳ ವಯಸ್ಸಿಗೆ ಅನುಗುಣವಾದ ಸುರಸುರಬತ್ತಿ, ಹೂವಿನಕುಂಡ, ಸ್ಪಾರ್ಕ್ಲರ್‌ಗಳು, ಕೃಷ್ಣನಚಕ್ರ ಇರುತ್ತವೆ. ಅವುಗಳನ್ನು ಬಳಸುವಂತೆ ತಿಳಿಹೇಳಬೇಕು.

7.ಮತ್ತೆ ಮತ್ತೆ ಬೆಂಕಿ ಹಚ್ಚಬೇಡಿ
ಒಂದು ವೇಳೆ ಪಟಾಕಿ ಹೊತ್ತಿಕೊಳ್ಳದಿದ್ದರೆ, ಅದಕ್ಕೆ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸಬೇಡಿ. ತಕ್ಷಣ ಅದರ ಮೇಲೆ ನೀರು ಸುರಿದು ಸುರಕ್ಷಿತವಾಗಿ ವಿಲೇವಾರಿ ಮಾಡಿ. ಅದು ಅನಿರೀಕ್ಷಿತವಾಗಿ ಸ್ಫೋಟಗೊಳ್ಳಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಿ.

8.ಜನದಟ್ಟಣೆ ಇರುವ ಅಥವಾ ಸುತ್ತುವರಿದ ಪ್ರದೇಶಗಳ ಆಯ್ಕೆ ಬೇಡ
ಸೀಮಿತ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಉಸಿರುಗಟ್ಟುವಿಕೆ, ಅಪಘಾತಗಳು ಅಥವಾ ಬೆಂಕಿ ಅವಘಡ ಕೂಡ ಸಂಭವಿಸಬಹುದು. ಸುರಕ್ಷಿತವಾಗಿ ಹಬ್ಬ ಆಚರಿಸಲು ತೆರೆದ ಮೈದಾನಗಳು ಅಥವಾ ಗೊತ್ತುಪಡಿಸಿದ ವಲಯಗಳನ್ನು ಆರಿಸಿಕೊಳ್ಳಿ.

9.ಸಾಕುಪ್ರಾಣಿಗಳು ಮತ್ತು ಪರಿಸರವನ್ನು ರಕ್ಷಿಸಿ
ಜೋರಾಗಿ ಶಬ್ದ ಉಂಟುಮಾಡುವ ಪಟಾಕಿಗಳು ಪ್ರಾಣಿಗಳನ್ನು ಭಯಭೀತಗೊಳಿಸಬಹುದು. ಜೊತೆಗೆ ಗಾಳಿಯನ್ನು ಕಲುಷಿತಗೊಳಿಸಬಹುದು. ಪರಿಸರಸ್ನೇಹಿ ಮತ್ತು ಹೆಚ್ಚು ಶಬ್ದ ಬರದ ಪಟಾಕಿಗಳನ್ನು ಆರಿಸಿಕೊಳ್ಳಿ. ಪ್ರಾಣಿಗಳ ಕಾಳಜಿ, ಹೆಚ್ಚಿನ ವಾಯುಮಾಲಿನ್ಯ ತಪ್ಪಿಸಲು ಈ ಕ್ರಮ ಅನುಸರಿಸಿ.

10.ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ
ಪಟಾಕಿ ಸಿಡಿಸಿ ಮೋಜು-ಮಸ್ತಿ ಮಾಡಿದ ನಂತರ ಸುಟ್ಟ ಕ್ರ‍್ಯಾಕರ್ ಅವಶೇಷಗಳನ್ನು ಸ್ವಚ್ಛಗೊಳಿಸಿ. ಒಣ ತ್ಯಾಜ್ಯದ ತೊಟ್ಟಿಗಳಲ್ಲಿ ತಕ್ಷಣ ಅವುಗಳನ್ನು ಎಸೆಯಲು ಹೋಗಬೇಡಿ. ಇದರಿಂದ ಬೆಂಕಿ ಅವಘಡ ಸಂಭವಿಸಬಹುದು. ಆಕಸ್ಮಿಕ ಬೆಂಕಿಯನ್ನು ತಡೆಗಟ್ಟಲು ಮೊದಲು ಸುಟ್ಟ ಪಟಾಕಿಗಳನ್ನು ನೀರಿನಲ್ಲಿ ನೆನೆಸಿ ನಂತರ ವಿಲೇವಾರಿ ಮಾಡಿ.

Share This Article