Ditwah Effect: ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 334ಕ್ಕೆ ಏರಿಕೆ – 400 ಭಾರತೀಯರು, ಓರ್ವ ಪಾಕ್ ಪ್ರಜೆ ರಕ್ಷಿಸಿದ ವಾಯಪಡೆ

2 Min Read

– 370 ಮಂದಿ ನಾಪತ್ತೆ, ಇತ್ತ ತಮಿಳುನಾಡಿನಲ್ಲಿ ಮೂರು ಬಲಿ

ನವದೆಹಲಿ/ಕೊಲಂಬೋ: ದಿತ್ವಾ ಚಂಡಮಾರುತದ (Ditwah Effect) ಅಬ್ಬರಕ್ಕೆ ಉಂಟಾಗಿರುವ ಭೂಕುಸಿತ, ಪ್ರವಾಹದ ಪರಿಣಾಮ ಶ್ರೀಲಂಕಾದಲ್ಲಿ (Srilanka) 334 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭಾರತೀಯ ವಾಯುಪಡೆ ಓರ್ವ ಪಾಕ್ ಪ್ರಜೆ ಸೇರಿ 455 ಜನರನ್ನು  ರಕ್ಷಿಸಿದೆ.

ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ, ಭಾನುವಾರ (ನ.30) ಪ್ರವಾಹ ಹಾಗೂ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 334ಕ್ಕೆ ತಲುಪಿದ್ದು, ಸುಮಾರು 370 ಮಂದಿ ನಾಪತ್ತೆಯಾಗಿದ್ದಾರೆ. ಇನ್ನೂ 2,66,114 ಕುಟುಂಬಗಳ 9,68,304 ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರ ನೆರವಿಗಾಗಿ 919 ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.ಇದನ್ನೂ ಓದಿ: Cyclone Ditwah | ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿಂದು ಮಳೆ – ಇನ್ನೂ 3 ದಿನ ಹೀಗೆ ಮೈ ಕೊರೆವ ಚಳಿ!

`ಆಪರೇಷನ್ ಸಾಗರ ಬಂಧು’ ಅಡಿಯಲ್ಲಿ ಭಾರತ ಶ್ರೀಲಂಕಾಕ್ಕೆ ನೆರವಿನ ಹಸ್ತ ಮುಂದುವರಿಸಿದ್ದು, 80 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ಆಹಾರ, ಔಷಧ ಸೇರಿ ಅಗತ್ಯ ವಸ್ತುಗಳನ್ನು ತಲುಪಿಸಲಾಗಿದೆ. ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ನೆರವಿನಿಂದ ಶ್ರೀಲಂಕಾದಲ್ಲಿ ಸಿಲುಕಿದ್ದ 400 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕಳಿಸಲಾಗಿದ್ದು, ಓರ್ವ ಪಾಕ್ ಪ್ರಜೆಯನ್ನು ರಕ್ಷಿಸಲಾಗಿದೆ. ಅಲ್ಲದೇ ಪೋಲೆಂಡ್ 3, ಬೆಲಾರಸ್ 6, ಇರಾನ್ 5, ಆಸ್ಟ್ರೇಲಿಯಾ 1, ಬಾಂಗ್ಲಾದೇಶ 1, ಜರ್ಮನಿ 2, ದಕ್ಷಿಣ ಆಫ್ರಿಕಾ 4, ಸ್ಲೊವೇನಿಯಾ 2 ಮತ್ತು ಯುನೈಟೆಡ್ ಕಿಂಗ್‌ಡಮ್‌ನ 2 ನಾಗರಿಕರು ಸೇರಿದಂತೆ ಒಟ್ಟು 55 ಜನರನ್ನು ರಕ್ಷಣೆ ಮಾಡಿದೆ.

ಚಂಡಮಾರುದಿಂದ ಶ್ರೀಲಂಕಾ ಅಕ್ಷರಶ: ತತ್ತರಿಸಿಹೋಗಿದ್ದು, ಕಲಾನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ರಾಜಧಾನಿ ಕೋಲಂಬೊದ ಪೂರ್ವ ಉಪನಗರಗಳಿಗೆ ಕಟ್ಟೆಚ್ಚರ ಘೋಷಿಸಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿರುವವರಿಗೆ ಸುರಕ್ಷಿತ ಜಾಗಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.ಇದನ್ನೂ ಓದಿ: ಕನಿಷ್ಠ ತಾಪಮಾನ 12°ಗೆ ಇಳಿಕೆ – ʻದಿತ್ವಾʼ ಎಫೆಕ್ಟ್‌ಗೆ ಮಂಜಿನ ನಗರಿಯಾದ ಬೀದರ್!

ತಮಿಳುನಾಡಿನಲ್ಲಿ ಮೂವರು ಬಲಿ:
ದಿತ್ವಾ ಚಂಡಮಾರುತ ಅಬ್ಬರದಿಂದಾಗಿ ತಮಿಳುನಾಡಿನಲ್ಲಿ (Tamilnadu) ಮೂವರು ಬಲಿಯಾಗಿದ್ದು, ಆಂಧ್ರಪ್ರದೇಶ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಿದೆ. ತಮಿಳುನಾಡಿನ ತೂತುಕುಡಿ ಮತ್ತು ತಂಜಾವೂರಿನಲ್ಲಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದರೆ, ಮೈಲಾಡುತುರೈನಲ್ಲಿ 20 ವರ್ಷದ ಯುವಕ ವಿದ್ಯುತ್ ಸ್ಪರ್ಶದಿಂದ ಪ್ರಾಣಕಳೆದುಕೊಂಡಿದ್ದಾರೆ.

ಡೆಲ್ಟಾ ಜಿಲ್ಲೆಗಳಲ್ಲಿ 149 ಜಾನುವಾರುಗಳು ಸಾವನ್ನಪ್ಪಿದ್ದು, 57,000 ಹೆಕ್ಟೇರ್ ಕೃಷಿಭೂಮಿಗೆ ಹಾನಿಯಾಗಿದೆ. ಸುಮಾರು 234 ಗುಡಿಸಲುಗಳು ಹಾನಿಗೊಳಗಾಗಿದೆ. ಸಂತ್ರಸ್ತರ ನೆರವಿಗಾಗಿ 28 ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಇತರ ರಾಜ್ಯಗಳಿಂದಲೂ 10 ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಧಾವಿಸಿವೆ.ಇದನ್ನೂ ಓದಿ: `ದಿತ್ವಾʼ ಅಬ್ಬರಕ್ಕೆ ಕನಿಷ್ಠ ಉಷ್ಣಾಂಶ ದಾಖಲು – ಇನ್ನೂ ಮೂರು ದಿನ ಇರಲಿದೆ ಮೈ ಕೊರೆವ ಚಳಿ

Share This Article