ಬೆಂಗಳೂರು | ಮೊದಲ ದಿನವೇ ಜಾತಿಗಣತಿ ಸಮೀಕ್ಷೆಗೆ ವಿಘ್ನ – ಗೊಂದಲ ನಿವಾರಣೆಗೆ ಗಣತಿದಾರರಿಂದ ಪ್ರತಿಭಟನೆ

Public TV
2 Min Read

ಬೆಂಗಳೂರು: ನಗರದಲ್ಲಿ ತಡವಾಗಿ ಆರಂಭವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಹತ್ತಾರು ವಿಘ್ನ ಎದುರಾಗಿದೆ. ಹೀಗಾಗಿ ವೈಯಾಲಿಕಾವಲ್ ಬಿಬಿಎಂಪಿ (BBMP) ಕಚೇರಿಯಲ್ಲಿ ಗೊಂದಲಗಳ ನಿವಾರಣೆಗೆ ಆಗ್ರಹಿಸಿ ನೂರಾರು ಜನ ಗಣತಿದಾರರು ಪ್ರತಿಭಟನೆ ನಡೆಸಿದರು.

ಬಹಳಷ್ಟು ಜನ ಗಣತಿದಾರರು ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಿಂದ ಸಮೀಕ್ಷೆಗೆ ಹೋಗದೇ ಗೊಂದಲಗಳಿಂದಾಗಿ ಪರದಾಡಿದರು. ವಾರ್ಡ್‌ಗಳ ಹಂಚಿಕೆಯಲ್ಲಿ ಗೊಂದಲ, ರೋಗಿಗಳನ್ನೂ ಗಣತಿಗೆ ನೇಮಕ, ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಸೇರಿ ಹತ್ತಾರು ಗೊಂದಲಗಳಿಂದಾಗಿ ಮೊದಲ ದಿನವೇ ಸಮೀಕ್ಷೆಗೆ ವಿಘ್ನ ಎದುರಾಗಿದೆ. ಗೊಂದಲಗಳ ಬಗೆಹರಿಸಲು ಆಗ್ರಹಿಸಿ ಜಿಬಿಎ ಅಧಿಕಾರಿಗಳ ಜೊತೆ ಗಣತಿದಾರರು ವಾಗ್ವಾದ ನಡೆಸಿದರು.ಇದನ್ನೂ ಓದಿ: ಮುಜರಾಯಿಂದ ಬಿಗ್‌ಶಾಕ್ – 40 ವರ್ಷಗಳಿಂದ ಬೆಂಗ್ಳೂರಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳು ಜಪ್ತಿ

ತಮ್ಮ ಕ್ಷೇತ್ರ ಬಿಟ್ಟು 30-40 ಕಿ.ಮೀ ದೂರದ ಕ್ಷೇತ್ರಗಳಿಗೆ ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ. ಜೊತೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಣತಿದಾರರು ಬೇಸರ ಹೊರಹಾಕಿದರು. ಕೊನೆಗೆ ಗೊಂದಲ ಬಗೆಹರಿಸಲು ಎರಡು ದಿನ ಸಮಯಾವಕಾಶ ಪಡೆದ ಜಿಬಿಎ ಅಧಿಕಾರಿಗಳು, ಗಣತಿದಾರರಿಂದ ಕೋರಿಕೆ ಅರ್ಜಿಗಳನ್ನು ಸ್ವೀಕರಿಸಿ ಕಳುಹಿಸಿದರು.

ಬೆಂಗಳೂರು ಗಣತಿದಾರರ ಗೊಂದಲಗಳೇನು?
– ವಾರ್ಡ್‌ಗಳ ಹಂಚಿಕೆಯಲ್ಲಿ ಗೊಂದಲ – ಸ್ಥಳೀಯವಾಗಿ ಹತ್ತು ವಾರ್ಡ್‌ಗಳ ಆಯ್ಕೆಗೆ ಅವಕಾಶ. ಆದರೆ ಗಣತಿದಾರರು ಆಯ್ಕೆ ಮಾಡಿದ ವಾರ್ಡ್‌ಗಳನ್ನು ಬಿಟ್ಟು ದೂರ ದೂರದ ವಾರ್ಡ್ಗಳಿಗೆ ಹಂಚಿಗೆ ಮಾಡಲಾಗಿದೆ.
– ವಿಕಲ ಚೇತನರಿಗೆ, ಮಕ್ಕಳಿರುವ ತಾಯಂದಿರು, ಗರ್ಭಿಣಿಯರಿಗೆ ದೂರದ ವಾರ್ಡ್‌ಗಳ ಹಂಚಿಕೆಯಿಂದ ಭಾರೀ ಸಮಸ್ಯೆ.
– ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಿಗೆ ನಗರದೊಳಗೆ ಗಣತಿಗೆ ನಿಯೋಜನೆ ಮಾಡಿದ್ದು, 20, 30, 40 ಕಿ.ಮೀ ದೂರ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.
– ಹೃದ್ರೋಗ ಸೇರಿ ಕೆಲ ರೋಗಗಗಳಿಂದ ನರಳುತ್ತಿರುವ ಸರ್ಕಾರಿ ನೌಕರರಿಗೂ ಗಣತಿಗೆ ನೇಮಕ ಮಾಡಿದ್ದಾರೆ. ಗಣತಿಯಿಂದ ವಿನಾಯಿತಿ ಕೊಡ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
– ಹಲವು ವಿಕಲಚೇತನರು ಗಣತಿಯಿಂದ ವಿನಾಯಿತಿ ಕೋರಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸ್ತಿಲ್ಲ ಎಂದು ಆರೋಪ
– ಸಮೀಕ್ಷೆ ಆ್ಯಪ್ ಗೊಂದಲ, ತಾಂತ್ರಿಕ ಸಮಸ್ಯೆ ನಿವಾರಣೆ ಆಗಿಲ್ಲ.

ಪ್ರತಿ ಗಣತಿದಾರರಿಗೆ ಒಟ್ಟು 300 ಮನೆಗಳ ಗಣತಿಗೆ ಸೂಚನೆ ನೀಡಲಾಗಿದ್ದು, ಅ.4ರಿಂದ ಒಟ್ಟು 14 ದಿನಗಳ ಕಾಲ ಗಣತಿ ನಡೆಯಲಿದೆ. ಇನ್ನೂ ಗಣತಿ ಸಂದರ್ಭದಲ್ಲಿ ಒಂದು ಮನೆಯ ಗಣತಿಗೆ ಕನಿಷ್ಟ ಅರ್ಧ ಗಂಟೆಯಿಂದ ಒಂದು ಗಂಟೆ ಕಾಲ ಬೇಕೇ ಬೇಕು. ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದಷ್ಟೂ ಸಮೀಕ್ಷೆಗೆ ಹೆಚ್ಚು ಸಮಯ ಹಿಡಿಯಲಿದೆ. ಜೊತೆಗೆ ಒಟ್ಟು 60 ಪ್ರಶ್ನೆಗಳ ಪೈಕಿ 40 ಪ್ರಶ್ನೆಗಳನ್ನು ಮನೆಯ ಪ್ರತಿ ಸದಸ್ಯರಿಗೂ ಪ್ರತ್ಯೇಕವಾಗಿ ಕೇಳಿ ಬರೆದುಕೊಳ್ಳಬೇಕು. ಉಳಿದ 20 ಸಾಮಾನ್ಯ ಪ್ರಶ್ನೆಗಳಿಗೆ ಕುಟುಂಬದ ಯಾರಾದರೂ ಒಬ್ಬರಿಂದ ಉತ್ತರ ಪಡೆಯಬೇಕು ಎಂಬ ಸೂಚನೆಯಿದೆ.ಇದನ್ನೂ ಓದಿ: ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ

 

Share This Article