ಜನ್ಮ ಜನ್ಮಕ್ಕೂ ಮರೆಯದ ತೀರ್ಪು ಕೊಡೋಣ: ಅನರ್ಹರ ವಿರುದ್ಧ ಪ್ರಕಾಶ್ ರಾಜ್ ಕಿಡಿ

Public TV
2 Min Read

ಬೆಂಗಳೂರು: ಜನ್ಮ ಜನ್ಮಕ್ಕೂ ಮರೆಯದ ತೀರ್ಪು ಕೊಡುವುದು ಈಗ ನಮ್ಮ ಜವಾಬ್ದಾರಿ ಎಂದು ನಟ ಪ್ರಕಾಶ್ ರಾಜ್, ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿದ್ದು, ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪಿತ್ತಿದೆ. ಹೀಗಾಗಿ 17 ಮಂದಿ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ವಿಚಾರವಾಗಿ ಪ್ರಕಾಶ್ ರಾಜ್, ಹಾವೂ ಸಾಯ್ಬಾರ್ದು.. ಕೋಲೂ ಮುರೀಬಾರ್ದು ಎನ್ನುವ ರೀತಿ ತೀರ್ಪು ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ‘ಹಾವೂ ಸಾಯ್ಬಾರ್ದು.. ಕೋಲೂ ಮುರೀಬಾರ್ದು’ ಎನ್ನುವ ತೀರ್ಪಿನ ಆಶೀರ್ವಾದ ಪಡೆದುಕೊಂಡು ‘ತೃಪ್ತ’ ಶಾಸಕರು ಕೊಂಕಣ ಸುತ್ಕೊಂಡು ಮೈಲಾರಕ್ಕೆ ಬಂದಿವೆ. ಒಳ್ಳೇದೆ ಆಯ್ತು, ಸ್ವಾಭಿಮಾನಿ ಕನ್ನಡಿಗರೇ ಇವುಗಳು ಜನ್ಮ ಜನ್ಮಕ್ಕೂ ಮರೆಯದೆ ಇರುವ ತೀರ್ಪು ಕೊಡುವುದು ಈಗ ನಮ್ಮ ಜವಾಬ್ದಾರಿ ಎಂದು ಬರೆದುಕೊಂಡಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಗೆದ್ದು ಬೀಗುತ್ತಿರುವ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಬೇಕು. ಈ ಮೂಲಕ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಪ್ರಕಾಶ್ ರಾಜ್ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಮುಗಿಯುವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಚುನಾವಣೆಗೆ ಆಯ್ಕೆಯಾಗದ ಹೊರತು ಸರ್ಕಾರದಲ್ಲಿ ಯಾವುದೇ ಅಧಿಕಾರ ಹೊಂದುವಂತಿಲ್ಲ. ಸ್ಪೀಕರ್ ಅವರಿಗೆ ಅನರ್ಹತೆ ಮಾಡಲು ಮಾತ್ರ ಅಧಿಕಾರ ಇರುತ್ತದೆ ಹೊರತು ನಿರ್ಧಿಷ್ಟ ಸಮಯದವರೆಗೆ ಅನರ್ಹ ಮಾಡಲು ಅವಕಾಶ ಇಲ್ಲ ಎಂದು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಅನರ್ಹತೆಯಾದರೂ ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಕೆಲವರು ಸ್ಪಷ್ಟಪಡಿಸಿದ್ದಾರೆ.

ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *