ಅನರ್ಹರಿಗೆ ಬಿಎಸ್‌ವೈ ಆಡಿಯೋ ಸಂಕಷ್ಟ-ಸುಪ್ರೀಂಗೆ ಸಾಕ್ಷ್ಯ ಸಲ್ಲಿಸಲಿದೆ ಕಾಂಗ್ರೆಸ್

Public TV
2 Min Read

-ಅನರ್ಹರ ಎದೆ ಬಡಿತ ಹೆಚ್ಚಿಸಿದ ಆಡಿಯೋ

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪವರ ಆಡಿಯೋ ಬಾಂಬ್ ಇಂದು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ. ಇನ್ನೇನು ಸಂಕಷ್ಟದಿಂದ ಮುಕ್ತವಾಗಲಿದ್ದೇವೆ ಅಂದುಕೊಂಡಿದ್ದ ಅನರ್ಹ ಶಾಸಕರಿಗೆ ಮತ್ತೊಂದು ಅಗ್ನಿ ಪರೀಕ್ಷೆ ಶುರುವಾಗಿದೆ. ಕಾಂಗ್ರೆಸ್ ಇಂದು ಯಡಿಯೂರಪ್ಪನವರ ಆಡಿಯೋ ಕ್ಲಿಪ್ ಸಮೇತ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದು, ವಿಚಾರಣೆ ಬಳಿಕವೂ ಇದನ್ನು ಸಾಕ್ಷಿ ಆಗಿ ಪರಿಗಣಿಸುತ್ತಾ ಎಂಬ ಕುತೂಹಲ ಮೂಡಿಸಿದೆ.

ದೋಸ್ತಿ ಸರ್ಕಾರ ಪತನಕ್ಕೆ ಕಾರಣವಾದ ಅನರ್ಹರ ಶಾಸಕರ ಭವಿಷ್ಯವನ್ನು ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್ ಬರೆಯಲಿದೆ. ಈ ಸಮಯದಲ್ಲಿ ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಆಡಿಯೋ-ವಿಡಿಯೋ ಅನರ್ಹರ ಶಾಸಕರ ಎದೆಬಡಿತ ಹೆಚ್ಚಿಸಿದೆ. ಕಾರಣ ಸಿಎಂ ಯಡಿಯೂರಪ್ಪ ಆಡಿಯೋವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಬೇಕು ಅಂತಾ ಕಾಂಗ್ರೆಸ್ ವಕೀಲರು ಇಂದು ಮನವಿ ಮಾಡಲಿದ್ದಾರೆ.

ಆಪರೇಷನ್ ಕಮಲದ ಬಗೆಗಿನ ಆಡಿಯೋ-ವಿಡಿಯೋ ವೈರಲ್ ಅಸ್ತ್ರ ಕಾಂಗ್ರೆಸ್ ಬತ್ತಳಿಕೆ ಸೇರುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಒಂದೇ ದಿನಕ್ಕೆ ಉಲ್ಟಾ ಹೊಡೆದರು. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದ ಬಿಎಸ್‌ವೈ, ಹುಬ್ಬಳ್ಳಿಯಲ್ಲಿ ಮಾತಾಡಿದ್ದು ನಿಜ ಅಂತ ಒಪ್ಪಿಕೊಂಡಿದ್ದರು. ಆದರೆ ಭಾನುವಾರ ಬೆಳಗ್ಗೆ ಉಲ್ಟಾ ಹೊಡೆದು ಅನರ್ಹರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅನರ್ಹರು ಅವರ ನಿರ್ಧಾರ ಅವರು ಹೇಳುತ್ತಾರೆ ಅಂತ ಹೇಳುವ ಮೂಲಕ ವೈರಲ್‌ನಿಂದಾಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದರು.

ಇಂದು ಸುಪ್ರೀಂಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆಯೇ ಬೆಳಗ್ಗೆ 10:30ಕ್ಕೆ ನ್ಯಾ. ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಕಾಂಗ್ರೆಸ್‌ನವರು ಯಡಿಯೂರಪ್ಪ ಆಡಿಯೋ ಪ್ರಕರಣದ ಪ್ರಸ್ತಾಪ ಮಾಡಲಿದ್ದಾರೆ. ಅನರ್ಹ ಶಾಸಕರು ಬಿಜೆಪಿ ನಾಯಕರ ಆಮಿಷಕ್ಕೆ ಬಲಿಯಾಗಿರುವುದು ಸ್ಪಷ್ಟವಾಗಿದೆ. ಸಿಎಂ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸತ್ಯ ಒಪ್ಪಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರೂ ಆಪರೇಷನ್‌ನಲ್ಲಿ ಭಾಗಿಯಾಗಿದ್ದಾರೆ. ವಿಚಾರಣೆ ವೇಳೆ ಇದೇ ಆರೋಪ ಮಾಡಲಾಗಿತ್ತು. ಈಗ ಸಿಎಂ ಯಡಿಯೂರಪ್ಪ ಅವರೇ ಶಾಸಕರ ರಾಜೀನಾಮೆ ಕೊಡಿಸುವುದರ ಹಿಂದೆ ಬಿಜೆಪಿ ಪಾತ್ರ ಇದೆ ಎಂದಿದ್ದಾರೆ. ಸ್ಪೀಕರ್ ತೀರ್ಪಿನಲ್ಲೂ ಬಿಜೆಪಿ ಪಾತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸ್ಪೀಕರ್ ತೀರ್ಪಿಗೆ ಪೂರಕವಾಗಿ ವಿಡಿಯೋ ಸಾಕ್ಷಿ ಪರಿಗಣಿಸಬೇಕು ಅಂತಾ ಮನವಿ ಮಾಡಲಿದ್ದಾರೆ.

ಯಡಿಯೂರಪ್ಪವರ ಆಡಿಯೋ ಎರಡೂ ಪಕ್ಷದ ಅನರ್ಹ ಶಾಸಕರಿಗೆ ಅನ್ವಯಿಸುತ್ತದೆ. ಯಾಕಂದ್ರೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟ ದಿನವೇ ಜೆಡಿಎಸ್‌ನ ಮೂವರು ಶಾಸಕರು ಗುಂಪಾಗಿ ರಾಜೀನಾಮೆ ಕೊಟ್ಟು ಮುಂಬೈಗೆ ತೆರಳಿದ್ದರು. ಸುಪ್ರೀಂಕೋರ್ಟ್ ಕೂಡ ಒಟ್ಟಿಗೆ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ.

ಸಾಕ್ಷಿಯಾಗಿ ಪರಿಗಣಿಸುತ್ತಾ ಸುಪ್ರೀಂ?
ತೀರ್ಪು ಹೊರ ಬರಬೇಕಿರುವ ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮತ್ತೆ ವಿಚಾರಣೆಗೆ ಒಪ್ಪುತ್ತಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ. ಒಂದು ವೇಳೆ ಸುಪ್ರೀಂಕೋರ್ಟ್ ವಿಚಾರಣೆ ಒಪ್ಪಿಕೊಂಡರೇ ಮತ್ತೆ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಚಾರಣೆ ಅವಕಾಶ ನೀಡದೇ ಸುಪ್ರೀಂಕೋರ್ಟ್ ಲಿಖಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿಬಹುದು. ಅಥವಾ ವಿಚಾರಣೆ ಅಂತ್ಯವಾಗಿರೊದ್ರಿಂದ ದಾಖಲೆಗಳನ್ನು ಪರಿಗಣಿಸದೆಯೂ ಇರಬಹುದು. ಹೀಗಾಗಿ ಸುಪ್ರೀಂಕೋರ್ಟ್ ಇಂದು ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೊ ಕುತೂಹಲ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *