ನೋ ಆಪರೇಷನ್ ಕಮಲ- ಬಿಜೆಪಿಗೆ ಅನರ್ಹ ಶಾಸಕರ ಹೊಸ ಷರತ್ತು

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಆಪರೇಷನ್ ಕಮಲದ ಕಸರತ್ತುಗಳು ಮಾತ್ರ ನಿಂತಂತೆ ಕಾಣುತ್ತಿಲ್ಲ. ಸರ್ಕಾರವನ್ನು ಮತ್ತಷ್ಟು ಸುಭದ್ರ ಮಾಡಿಕೊಳ್ಳಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆಯಂತೆ. ಇತ್ತ ಅನರ್ಹ ಶಾಸಕರು ನಮ್ಮ ಸ್ಥಾನಮಾನ ಅಂತಿಮವಾಗುವರೆಗೂ ನೋ ಆಪರೇಷನ್ ಕಮಲ ಎಂದು ಬಿಜೆಪಿಗೆ ಷರತ್ತು ಹಾಕಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

ಬಿಜೆಪಿಯ ಆಪರೇಷನ್ ಕಮಲಕ್ಕೆ ಅನರ್ಹ ಶಾಸಕರು ಅಡ್ಡಿಯಾಗಿದ್ದಾರೆ. ನಮಗೆ ಸಿಗಬೇಕಾದ ಸ್ಥಾನಮಾನಗಳು ಸಿಕ್ಕಿಲ್ಲ. ಇತ್ತ ನ್ಯಾಯಾಲಯದಲ್ಲಿ ಪ್ರಕರಣ ವಿಳಂಬವಾಗುತ್ತಿದ್ದು, ಎಲ್ಲರೂ ಅನರ್ಹರಾಗಿ ಅತಂತ್ರ ಸ್ಥಿತಿಯಲ್ಲಿದ್ದೇವೆ. ರಾಜೀನಾಮೆ ನೀಡಿ ಬಂದಿರುವ ನಮಗೆ ಮೊದಲ ಆದ್ಯತೆ ನೀಡಬೇಕು. ನಮಗೆ ಪಕ್ಷದಲ್ಲಿ ಮತ್ತು ಸಂಪುಟದಲ್ಲಿ ಸ್ಥಾನಮಾನಗಳು ಖಾತ್ರಿಯಾದ ಬಳಿಕವಷ್ಟೇ ನೀವು ಆಪರೇಷನ್ ಕಮಲಕ್ಕೆ ಮುಂದಾಗಬೇಕು. ನಮ್ಮೆಲ್ಲರ ರಾಜಕೀಯ ಭವಿಷ್ಯ ಮೊದಲು ಗಟ್ಟಿ ಮಾಡಿಕೊಡಬೇಕು. ನಮ್ಮಿಂದನೇ ಸರ್ಕಾರ ರಚಿಸಿ ನಮಗೇನೂ ಮಾಡದೇ ಮತ್ತೆ ಆಪರೇಷನ್ ಮಾಡಕೂಡದು ಎಂಬ ಎಚ್ಚರಿಕೆಯ ಸಂದೇಶವನ್ನು ಬಿಜೆಪಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದು ತೀರ್ಪು ಬರೋವರೆಗೂ ಅನರ್ಹ ಶಾಸಕರು ಕಾಯಲೇಬೇಕು. ಈ ಮಧ್ಯೆ ಜೆಡಿಎಸ್ ನಿಂದ ಮತ್ತೆ ಕೆಲ ಶಾಸಕರು ಬಿಜೆಪಿಗೆ ಬರಲು ಸಿದ್ಧಗೊಂಡಿರುವ ಇರೋ ಸುದ್ದಿ ಅನರ್ಹ ಶಾಸಕರ ನಿದ್ದೆ ಕೆಡಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಎಲ್ಲ ಶಾಸಕರು ಒಂದೆಡೆ ಸೇರಿ ಸಭೆ ನಡೆಸಿ ತಮ್ಮ ತೀರ್ಮಾನವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಕಮಲಕ್ಕೆ ನೋ ಅಂದಿದ್ಯಾಕೆ?
ಒಂದು ವೇಳೆ ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದ್ರೆ ಅವರಿಗೆ ಯಾವುದೇ ಕಾನೂನು ತೊಡಕುಗಳು ಎದುರಾಗಲ್ಲ. ಯಾಕಂದ್ರೆ ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಒಂದು ವೇಳೆ ಆಪರೇಷನ್ ಕಮಲ ಮಾಡಿ ಹೊಸ ಟೀಂ ಬಂದ್ರೆ ನಮ್ಮನ್ನು ಕಡೆಗಣಿಸೋ ಸಾಧ್ಯತೆಯೇ ಹೆಚ್ಚು. ಎರಡನೇ ಬಾರಿ ಬಂದವರು ನೇರವಾಗಿ ಸಂಪುಟ ಸೇರಿಕೊಳ್ಳಬಹುದು. ಮುಂದೆ ನಡೆಯುವ ಉಪಚುನಾವಣೆಗೂ ಸ್ಪರ್ಧೆ ಮಾಡಬಹುದು. ಆಗ ಬಿಜೆಪಿಗೆ ನಾವು 17 ಜನರೂ ಅನಿವಾರ್ಯ ಆಗಲ್ಲ. ಈ ಹಂತದಲ್ಲೇ ನಾವು ಎಚ್ಚೆತ್ತುಕೊಂಡು ಬಿಜೆಪಿಯನ್ನು ಬಿಗಿ ಮಾಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋದ ಮೇಲೆ ಏನೂ ಮಾಡಲು ಆಗಲ್ಲ. ಗಂಭೀರವಾಗಿ ಯೋಚನೆ ಮಾಡಿರುವ ಅನರ್ಹರು ಈಗ ಬಿಜೆಪಿಗೆ ಹೊಸ ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *