ನಾನು ಎಕ್ಸ್ ಎಂಎಲ್‍ಎ ಅಲ್ಲ: ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಹೆಬ್ಬಾರ್ ಗರಂ

Public TV
1 Min Read

ನವದೆಹಲಿ: ಯಾರು ಎಕ್ಸ್ ಎಂಎಲ್‍ಎ? ನಾನು ಮಾಜಿ ಶಾಸಕನಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಗುಡುಗಿದ್ದಾರೆ.

ಸುಪ್ರೀಂಕೋರ್ಟ್ ಬುಧವಾರ ಅನರ್ಹ ಶಾಸಕರ ಪ್ರಕರಣದ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ಶಿವರಾಮ್ ಹೆಬ್ಬಾರ್ ಮಂಗಳವಾರ ರಾತ್ರಿ ಕರ್ನಾಟಕ ಭವನಕ್ಕೆ ಆಗಮಿಸಿದರು. ಈ ವೇಳೆ ರೂಮ್ ನೀಡುವಂತೆ ಕೆ.ಬಿ 1ನ ಸಿಬ್ಬಂದಿಗೆ ಕೇಳಿದರು. ಆದರೆ ರೂಮ್ ನೀಡಲು ನಿರಾಕರಿಸಿದ ಸಿಬ್ಬಂದಿ, ರೂಮ್ ಖಾಲಿ ಇಲ್ಲ. ಇಲ್ಲಿ ಕೇವಲ ಹಾಲಿ ಮತ್ತು ಮಾಜಿ ಸಚಿವರಿಗೆ ಮಾತ್ರ ರೂಮ್ ಕೊಡಲಾಗುತ್ತದೆ. ಶಾಸಕರು ಮತ್ತು ಮಾಜಿ ಶಾಸಕರಿಗೆ ಕೆಬಿ 2ನಲ್ಲಿ ರೂಂ ಸಿಗುತ್ತದೆ ಎಂದು ಹೇಳಿದ.

ಕರ್ನಾಟಕ ಭವನ ಸಿಬ್ಬಂದಿಯ ಮಾತಿನಿಂದ ಫುಲ್ ಗರಂ ಆದ ಅನರ್ಹ ಶಾಸಕರು, ಯಾರಪ್ಪಾ ಎಕ್ಸ್ ಎಂಎಲ್‍ಎ? ಒಬ್ಬರಿಗೊಂದು ಇನ್ನೊಬ್ಬರಿಗೊಂದು ಯಾಕ್ ಮಾಡ್ತಿರಿ ಎಂದು ಗುಡುಗಿದರು. ಆಗ ಕರ್ನಾಟಕ ಭವನದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಕರೆ ಮಾಡಿ, ವಿಚಾರಿಸಿದರು. ಈ ಮಧ್ಯೆ ಶಿವರಾಮ್ ಹೆಬ್ಬಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಲು ಹಿಂದೇಟು ಹಾಕಿದರು.

ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಧೀಶ ಎನ್.ವಿ.ರಮಣ ಪೀಠ ಪ್ರಕರಣದ ವಾದವನ್ನು ಆಲಿಸಿ ತೀರ್ಪನ್ನು ಬುಧವಾರಕ್ಕೆ ಕಾಯ್ದರಿಸಿತ್ತು. ಈ ನಡುವೆ ಕಾಂಗ್ರೆಸ್ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹುಬ್ಬಳ್ಳಿಯ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿತ್ತು. ಕಾಂಗ್ರೆಸ್ ಪರ ವಕೀಲ ವಾದವನ್ನು ಆಲಿಸಿದ ಪೀಠ ತೀರ್ಪು ನೀಡುವ ಸಂದರ್ಭದಲ್ಲಿ ಆಡಿಯೋವನ್ನ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ ಎಂದು ಸೂಚಿಸಿತ್ತು.

ತೀರ್ಪು ವಿಳಂಬವಾದ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೊಹ್ಟಗಿ, ಕರ್ನಾಟಕದಲ್ಲಿ ಘೋಷಣೆಯಾಗಿರುವ ಉಪಚುನಾವಣೆಯನ್ನು ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ರೊಹ್ಟಗಿಯವರ ವಾದ ಆಲಿಸಿದ್ದ ನ್ಯಾಯಾಲಯ, ಅನರ್ಹ ಶಾಸಕರಿಗಾಗಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *