ಎಸ್‍ಐಟಿ ಮುಂದೆ ಹಾಜರಾಗದ್ದಕ್ಕೆ ರೋಷನ್ ಬೇಗ್ ಕುಂಟು ನೆಪ

Public TV
1 Min Read

ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಎಸ್‍ಐಟಿ(ವಿಶೇಷ ತನಿಖಾ ದಳ) ಮುಂದೆ ಹಾಜರಾಗದ್ದಕ್ಕೆ ಅನರ್ಹ ಶಾಸಕ ರೋಷನ್ ಬೇಗ್ ಕುಂಟು ನೆಪ ಹೇಳಿದ್ದಾರೆ.

ಅನಾರೋಗ್ಯ ಇತ್ತು ಹೀಗಾಗಿ ನಿನ್ನೆ ವಿಚಾರಣೆಗೆ ಬಂದಿರಲಿಲ್ಲ. ಆಗಸ್ಟ್ 15ರ ಬಳಿಕ ವಿಚಾರಣೆಗೆ ಬರುತ್ತೇನೆ ಎಂದು ಸಬೂಬು ಹೇಳಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಎಸ್‍ಐಟಿ ಅವರು ರೋಷನ್ ಬೇಗ್ ಅವರನ್ನು ಒಮ್ಮೆ ಮಾತ್ರ ವಿಚಾರಣೆ ನಡೆಸಿದ್ದಾರೆ. ಹೀಗಾಗಿ ಮತ್ತೆ ವಿಚಾರಣೆಗೆ ಬರಬೇಕೆಂದು ಪದೇ ಪದೇ ನೋಟೀಸ್ ಕೊಟ್ಟರೂ ಅನರ್ಹ ಶಾಸಕ ಕ್ಯಾರೇ ಎಂದಿಲ್ಲ.

ಈ ಹಿನ್ನೆಲೆಯಲ್ಲಿ ಇದೀಗ ಎಸ್‍ಐಟಿಯವರು ರೋಷನ್ ಬೇಗ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಮಾಡಿದ್ದಾರೆ. ವಿಚಾರಣೆಗೆ ಸರಿಯಾಗಿ ಬರುತ್ತಿಲ್ಲ. ಕಾನೂನು ಕ್ರಮ ಮುಂದುವರಿಸಲು ಅವಕಾಶಕ್ಕೆ ಮನವಿ ಮಾಡಲು ನಿರ್ಧರಿಸಿದ್ದು, ಎಸ್‍ಐಟಿ ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಪದೇ ಪದೇ ಇವರಿಗೆ ಅವಕಾಶ ನೀಡಿದರೆ ಬೇರೆ ಆರೋಪಿಗಳು ಕೂಡ ಇದೇ ಚಾಳಿ ಮುಂದುವರಿಸುತ್ತಾರೆ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಾರ ಮಾಡಿರುವುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ನಿಂದ ಭಾರೀ ಹಣ ಪಡೆದ ಪಡೆದಿರುವ ಆರೋಪವನ್ನು ರೋಷನ್ ಬೇಗ್ ಎದುರಿಸುತ್ತಿದ್ದಾರೆ. ಮನ್ಸೂರ್ ಬಂಧನಕ್ಕೂ ಮುನ್ನ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಶಿವಾಜಿನಗರ ಶಾಸಕರು ತನ್ನಿಂದ ಹಣ ಪಡೆದು ವಾಪಸ್ ಕೊಟ್ಟಿಲ್ಲ ಎಂದು ದೂರಿದ್ದರು. ಈ ಸಂಬಂಧ ಪುಣೆಗೆ ಹೊರಟಿದ್ದು ರೋಷನ್ ಬೇಗ್ ಅವರನ್ನು ಏರ್ ಪೋರ್ಟಿನಲ್ಲೇ ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

Share This Article
Leave a Comment

Leave a Reply

Your email address will not be published. Required fields are marked *