ಉಪಚುನಾವಣೆಗಾಗಿ ಬಿಎಸ್‌ವೈ ಜೊತೆ ಚರ್ಚೆ, ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಲು ತೀರ್ಮಾನ: ಬೊಮ್ಮಾಯಿ

Public TV
1 Min Read

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ (BJP) ಚಟುವಟಿಕೆ ಬಿರುಸುಗೊಂಡಿದೆ.

ಇಂದು (ಅ.17) ಬೆಳಗ್ಗೆ ಸಂಸದ ಬಸವರಾಜ ಬೊಮ್ಮಾಯಿಯವರು (Basavaraj Bommai) ಮಾಜಿ ಸಿಎಂ ಯಡಿಯೂರಪ್ಪನವರನ್ನು (BS Yediyurappa) ಬೆಂಗಳೂರಿನಲ್ಲಿ ಭೇಟಿ ಮಾಡಿ ಶಿಗ್ಗಾಂವಿ (Shiggavi) ಟಿಕೆಟ್ ಬಗ್ಗೆ ಚರ್ಚಿಸಿದರು. ಬಿಎಸ್‌ವೈಯವರ ಧವಳಗಿರಿ ನಿವಾಸಕ್ಕೆ ಆಗಮಿಸಿ ಬೊಮ್ಮಾಯಿ ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದರು.

ಸದ್ಯ ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ ಮಾಜಿ ಸಚಿವ ನಿರಾಣಿ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ತಮ್ಮ ಪುತ್ರನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಬೊಮ್ಮಾಯಿಯವರು ಸೇಫ್ ಗೇಮ್‌ಗೆ ಮೊರೆ ಹೋಗಿದ್ದಾರೆ. ನೇರವಾಗಿ ಯಾವುದನ್ನೂ ವ್ಯಕ್ತಪಡಿಸದೇ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಈ ಮಧ್ಯೆ ಇಂದು ಬಿಎಸ್‌ವೈಯವರನ್ನು ಭೇಟಿ ಮಾಡಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ಹಿರಿಯ ನಾಯಕರು, ಸಹಜವಾಗಿ ಭೇಟಿ ಮಾಡುತ್ತೇವೆ. ಚುನಾವಣೆಯ ಬಗ್ಗೆ ಬಂದು ಮಾತನಾಡು ಎಂದಿದ್ದರು. ಅವರೊಂದಿಗೆ ಮಾತನಾಡಿದ್ದೇನೆ. ಶಿಗ್ಗಾಂವಿ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಯಿತು. ಚುನಾವಣೆಗೆ ಏನೇನು ತಯಾರಿ ಮಾಡಿದ್ದೇವೆ ಎನ್ನುವ ಕುರಿತು ಕೇಳಿದರು. ಮಾಡಿಕೊಂಡಿರುವ ಎಲ್ಲ ಸಿದ್ಧತೆಗಳ ಕುರಿತು ತಿಳಿಸಿದ್ದೇನೆ. ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆಯಾಗಿದೆ. ಅಂತಿಮವಾಗಿ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು ಎಂದು ತೀರ್ಮಾನವಾಗಿದೆ. ಎಲ್ಲ ಮೂರು ಕ್ಷೇತ್ರಗಳಲ್ಲೂ ಗೆಲ್ಲುವುದಕ್ಕೆ ಪ್ರಯತ್ನ ಮಾಡೋಣ ಎಂದಿದ್ದಾರೆ. ದೆಹಲಿಗೆ ಅ.19ರ ನಂತರ ಹೋಗುತ್ತೇನೆ ಎಂದು ಹೇಳಿದರು.

ಚನ್ನಪಟ್ಟಣ ಟಿಕೆಟ್ ಕುರಿತು ಮಾತನಾಡಿದ ಅವರು ಚನ್ನಪಟ್ಟಣದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ನಮ್ಮ ಪಕ್ಷದ ಹೈಕಮಾಂಡ್ ಸೇರಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Share This Article