ಧ್ವನಿವರ್ಧಕ ಬ್ಯಾನ್ ಮಾಡೋದಾದ್ರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ: ಉಮರ್ ಷರೀಫ್

Public TV
2 Min Read

ಬೆಂಗಳೂರು: ಮಸೀದಿಯಲ್ಲಿ ಧ್ವನಿವರ್ಧಕ ಬ್ಯಾನ್ ಮಾಡುವುದಾದರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಆಗ್ರಹಿಸಿದ್ದಾರೆ.

ಮಸೀದಿ ಮೇಲಿನ ಧ್ವನಿವರ್ಧಕ ನಿಷೇಧಿಸಲು ಹಿಂದೂ ಸಂಘಟನೆಗಳು ಅಭಿಯಾನ ನಡೆಸಲು ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಧ್ವನಿ ವರ್ಧಕ ಬ್ಯಾನ್ ಮಾಡುವುದಾದರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ. ಯಾವುದೇ ಹಬ್ಬಕ್ಕೂ ರಸ್ತೆಯಲ್ಲಿ ಸೌಂಡ್ ಕೇಳಬಾರದು. ಯಾವುದೇ ಮೆರವಣಿಗೆಯಲ್ಲೂ ಧ್ವನಿ ವರ್ಧಕಕ್ಕೆ ಅವಕಾಶ ನೀಡಬಾರದು. ಎಲ್ಲರಿಗೂ ಸಮಾನತೆ ಇರಲಿ. ಈ ನಿರ್ಧಾರ ತೆಗೆದುಕೊಂಡರೆ ಎಲ್ಲರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಕೇವಲ ಮಸೀದಿಗೆ ಮಾತ್ರ ಈ ನಿರ್ಧಾರ ಅಂದರೆ ಇದು ಅನ್ಯಾಯ. ಅನ್ಯಾಯ ಮಾಡಬೇಡಿ, ಒಂದೇ ನ್ಯಾಯ ಆದರೆ ನಾನು ಅವರ ಜೊತೆ ಕೈ ಜೋಡಿಸುತ್ತೇನೆ. ಹಿಜಬ್ ವಿಚಾರದಲ್ಲೂ ಹೀಗೆ ಆಯಿತು. ಕೈಸ್ತ ಮಹಿಳೆ ಒಂದು ಶಾಲೆಗೆ ಬಂದರೆ, ತಲೆ ಮೇಲೆ ಹಾಕಿರುವ ಬಟ್ಟೆಯನ್ನು ತೆಗೆಸುತ್ತೀರಾ? ಅದನ್ನ ತೆಗೆಸುವುದಕ್ಕೆ ಯಾರಿಗಾದರೂ ಧೈರ್ಯ ಇದೆಯಾ? ಆದರೆ ನಮಗೆ ಹಿಜಬ್ ತೆಗೆಯುವುದಕ್ಕೆ ಹೇಳುತ್ತೀರಾ. ಮಾಡುವುದಾದರೆ ಎಲ್ಲರಿಗೂ ಒಂದೇ ರೂಲ್ಸ್ ಮಾಡಿ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಮುಂದಾದ ಹಿಂದೂ ಸಂಘಟನೆಗಳು

HIJAB 2

ಹಿಜಬ್ ಚರ್ಚೆಯಂತೆ ನಾಮ ಹಾಕಿಕೊಂಡು ಬರಬೇಕಾ ಎನ್ನುವ ಬಗ್ಗೆ ಕೂಡ ಚರ್ಚೆ ನಡೆಯಲಿ. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಹ ತಲೆಗೆ ಸೆರಗು ಹಾಕಿಕೊಂಡು ಬರುತ್ತಿದ್ದರು. ನಾವು ಅವರನ್ನು ಹಾಕಬೇಡಿ ಅಂತ ಹೇಳಿ ಬ್ಯಾನ್ ಮಾಡಿದ್ವಾ? ನಮಗೆ ಏಕೆ ಅನ್ಯಾಯ, ನಮ್ಮನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಲೌಡ್ ಸ್ಪೀಕರ್ ಮಸೀದಿಯಲ್ಲಿ ಇರುವುದು ಮಸೀದಿಯಲ್ಲಿ ಮಾತ್ರನಾ? ಗಣೇಶ ಹಬ್ಬಕ್ಕೆ ರಸ್ತೆಗಳನ್ನು ಕ್ಲೋಸ್ ಮಾಡಿ ಲೌಡ್ ಸ್ಪೀಕರ್ ಹಾಕುತ್ತಾರೆ. ಕೆಲವು ಕಡೆ ಮಸೀದಿ ಮುಂದೆಯೇ ಕೆಲವರು ಪ್ರಚೋದನೆ ಮಾಡಲೆಂದೇ ಹಾಕುತ್ತಾರೆ. ಕೋಮುವಾದ, ರಾಜಕೀಯ ಬೆಳೆಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ. ಎಲ್ಲರಿಗೂ ಒಂದೇ ರೂಲ್ಸ್ ಜಾರಿಯಾದರೆ ನಾವು ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ

ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇಂತಹ ಚರ್ಚೆಗಳಿಂದ ಸಮಯ ವ್ಯರ್ಥವಾಗುತ್ತಿದೆ. ಹಲಾಲ್ ಬೇಕಿದ್ದರೆ ಹಲಾಲ್, ಜಟ್ಕಾ ಬೇಕಿದ್ದರೆ ಜಟ್ಕಾ ಏನಾದರೂ ತಿನ್ನಿ. ಸಮುದಾಯದಲ್ಲಿ ಬೇಕಾದ ವಿಚಾರ ಮಾತಾಡಿ. ಆದರೆ ಧರ್ಮವನ್ನು ರಾಜಕೀಯ ಬಳಕೆ ಮಾಡಬೇಡಿ. ಕೋಮುವಾದದಿಂದ ಏನು ಮಾಡುವುದಕ್ಕೆ ಆಗುವುದಿಲ್ಲ. ಕೋಮುವಾದ ಬಿಟ್ಟು ಎಲ್ಲರು ಒಟ್ಟಾಗಿ ಬಾಳಬೇಕಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *