Mumbai Boat Accident | ಸ್ಪೀಡ್‌ ಬೋಟ್‌ ಫೆರ್ರಿಗೆ ಡಿಕ್ಕಿ ಹೊಡೆಯಲು ಕಾರಣ ಏನು? ದುರಂತ ಹೇಗಾಯ್ತು?

Public TV
2 Min Read

ಮುಂಬೈ: ನೌಕಾಪಡೆಯ (Indian Navy) ಸ್ಪೀಡ್‌ ಬೋಟ್‌ ನಿಯಂತ್ರಣ ತಪ್ಪಿ ಪ್ರವಾಸಿಗರಿಂದ ಫೆರ್ರಿಗೆ ಡಿಕ್ಕಿ ಹೊಡೆದಿದ್ದರಿಂದ ಮುಂಬೈ ಸಮುದ್ರದಿಂದ ಘನಘೋರ ದುರಂತ ಸಂಭವಿಸಿದೆ.

ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ಗುಹೆಗಳ (Elephanta Island) ಕಡೆ ಜನರನ್ನು ಕರೆದೊಯ್ಯುತ್ತಿದ್ದ ಫೆರ್ರಿಗೆ (Passenger Ferry) ನೌಕಾ ಪಡೆಯ ಸ್ಪೀಡ್‌ ಬೋಟ್‌ (Speed Boat) ಡಿಕ್ಕಿ ಹೊಡೆದು ನೌಕಾಪಡೆಯ ಮೂವರು ಸಿಬ್ಬಂದಿ ಸೇರಿ 13 ಮಂದಿ ಮೃತಪಟ್ಟು 101 ಮಂದಿ ಗಾಯಗೊಂಡಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

ಘಟನೆ ಹೇಗಾಯ್ತು?
110 ಪ್ರಯಾಣಿಕರಿದ್ದ ನೀಲ್‌ ಕಮಾಲ್‌ ಹೆಸರಿನ ಫೆರ್ರಿ ಮಧ್ಯಾಹ್ನ 3:15ಕ್ಕೆ ಗೇಟ್‌ವೇ ಆಫ್ ಇಂಡಿಯಾದಿಂದ (Gateway of India) ಪ್ರಯಾಣ ಬೆಳೆಸಿತ್ತು. 8.5 ಕಿ.ಮೀ ದೂರದಲ್ಲಿರರುವ ಜವಾಹರ ದ್ವೀಪದ ಬಳಿ ಸಾಗುತ್ತಿದ್ದಾಗ ಫೆರ್ರಿಯ ಮುಂಭಾಗಕ್ಕೆ ಸಂಜೆ 3:55ಕ್ಕೆ ನೌಕಾಪಡೆಯ ಸ್ಫೀಡ್‌ ಬೋಟ್‌ ಡಿಕ್ಕಿ ಹೊಡೆದಿದೆ. ಬಲಗಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಫೆರ್ರಿ ಪಲ್ಟಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ನೌಕಾಪಡೆ, ಕರಾವಳಿ ಪಡೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿದ್ದಾರೆ. ನೌಕಾ ಪಡೆಯ 4 ಹೆಲಿಕಾಪ್ಟರ್‌ಗಳು, ನೌಕಾಪಡೆಯ 11 ಕ್ರಾಫ್ಟ್‌ಗಳು, ಕರಾವಳಿ ಕಾವಲು ಪಡೆಯ ಒಂದು ಬೋಟ್ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಕ್ಕೆ ನೆರವಾಗಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ನೀಲ್‌ ಕಮಾಲ್‌ನಲ್ಲಿ ಪ್ರಯಾಣಿಕರೊಬ್ಬರು ತೆಗೆದ ಘಟನೆಯ ವಿಡಿಯೋದಲ್ಲಿ ನೌಕಾಪಡೆಯ ಸ್ಫೀಡ್‌ ಬೋಟ್‌ ಬಲಭಾಗದಿಂದ ಫೆರ್ರಿಯನ್ನು ಹಿಂದಿಕ್ಕಿ, ಮುಂದೆ ಹೋಗಿ, ಯು-ಟರ್ನ್ ತೆಗೆದುಕೊಂಡು ಡಿಕ್ಕಿ ಹೊಡೆದ ದೃಶ್ಯ ಸೆರೆಯಾಗಿದೆ.

ಡಿಕ್ಕಿಯಾಗಲು ಕಾರಣ ಏನು?
ನೌಕಾಪಡೆಯ ಪ್ರಾಥಮಿಕ ತನಿಖೆಯ ವೇಳೆ ಸ್ಫೀಡ್‌ ಬೋಡ್‌ ಎಂಜಿನ್‌ ದೋಷದಿಂದ ನಿಯಂತ್ರಣ ಕಳೆದುಕೊಂಡ ವಿಚಾರ ಬೆಳಕಿಗೆ ಬಂದಿದೆ. ಸ್ಫೀಡ್‌ ಬೋಟ್‌ಗೆ ಕಡಿಮ ಗುಣಮಟ್ಟದ ಎಂಜಿನ್‌ ಅಳವಡಿಸಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಭಾರತೀಯ ನೌಕಾಪಡೆ ಅಪಘಾತದ ಬಗ್ಗೆ ಪ್ರತ್ಯೇಕ ತನಿಖೆಗೆ ಆದೇಶಿಸಿದೆ. ಕೊಲಾಬಾ ಪೊಲೀಸರು ಸ್ಫೀಡ್‌ ಬೋಟ್‌ ಚಾಲಕನ ವಿರುದ್ಧ ವಿವಿಧ ಬಿಎನ್‌ಎಸ್‌ ಸೆಕ್ಷನ್‌ ಅಡಿ ಕೇಸ್‌ ದಾಖಲಿಸಿದ್ದಾರೆ.

ಲೈಫ್‌ ಜಾಕೆಟ್‌ ನೀಡಿರಲಿಲ್ಲ:
ಫೆರ್ರಿ ಪ್ರಯಾಣದ ವೇಳೆ ಕಡ್ಡಾಯವಾಗಿ ಲೈಫ್‌ ಜಾಕೆಟ್‌ ಧರಿಸಬೇಕೆಂಬ ನಿಯಮವಿದೆ. ಆದರೆ ಫೆರ್ರಿ ಸಿಬ್ಬಂದಿ ಲೈಫ್‌ ಜಾಕೆಟ್‌ ನೀಡಿರಲಿಲ್ಲ. ಯಾವುದೇ ಸುರಕ್ಷತಾ ಸೂಚನೆಗಳನ್ನು ನೀಡಿರಲಿಲ್ಲ. ಫೆರ್ರಿ ಪಲ್ಟಿಯಾದ ನಂತರ ಲೈಫ್‌ ಜಾಕೆಟ್‌ ನೀಡಲಾಗಿತ್ತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

Share This Article