ಈ ಹಿಂದೆ ಟ್ರಾನ್ಸ್ ಸಾಂಗ್ ಒಂದರ ಮೂಲಕ ಯುವ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದ್ದ ಚಿತ್ರ `ಕೈಲಾಸ ಕಾಸಿದ್ರೆ’ (Kailasa Kasidre). ಕನ್ನಡದ ಮಟ್ಟಿಗೆ ಕೊಂಚ ಪರಿಚಿತವಾಗಿದ್ದ ಈ ಟ್ರಾನ್ಸ್ ಮಾದರಿಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಮೂಲಕ ಚಿತ್ರತಂಡ ಪ್ರೇಕ್ಷಕರಲ್ಲೊಂದು ಅಚ್ಚರಿ ಮೂಡಿಸಿತ್ತು. ನಶೆ ನೆತ್ತಿಗೇರಿಕೊಳ್ಳುವ ಉತ್ತುಂಗದ ಸ್ಥಿತಿಯನ್ನು ಕಟ್ಟಿ ಕೊಡುವ ಈ ಟ್ರಾನ್ಸ್ ಮಾದರಿ ಎಂಬುದು ಸದರಿ ಸಿನಿಮಾದ ನಿಜವಾದ ಆತ್ಮವಿದ್ದಂತೆ. ಈ ಮಾತನ್ನು ಖುದ್ದು ನಿರ್ದೇಶಕ ನಾಗ್ ವೆಂಕಟ್ (NagVenkat) ಖಚಿತಪಡಿಸುತ್ತಾರೆ. ಸಲೀಸಾಗಿ ಕಾಸು ಮಾಡಿಕೊಳ್ಳಬೇಕೆಂಬ ಆಕಾಂಕ್ಷೆಯೊಂದು ಈವತ್ತಿನ ಯುವ ಸಮುದಾಯಕ್ಕಂಟಿಕೊಂಡಿದೆ. ಅಂಥಾ ಮನಃಸ್ಥಿತಿ ನಶೆಯ ತೆಕ್ಕೆಗೆ ಸಿಕ್ಕರೆ ಏನೇನೆಲ್ಲ ಘಟಿದಬಹುದೆಂಬ ರೋಚಕ ವಿಚಾರಗಳು ಕೈಲಾಸದಲ್ಲಿವೆಯಂತೆ.
ಐಟಿ ಕ್ರೇತ್ರದಿಂದ ಚಿತ್ರರಂಗಕ್ಕೆ ಬಂದವರದ್ದೊಂದು ದಂಡೇ ಇದೆ. ಆ ಸಾಲಿಗೆ ನಾಗ್ ವೆಂಕಟ್ ಕೂಡಾ ಸೇರಿಕೊಳ್ಳುತ್ತಾರೆ. ಐಟಿ ವಲಯದಲ್ಲಿದ್ದುಕೊಂಡು, ಸಿನಿಮಾ ವ್ಯಾಮೋಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವವರು ನಾಗ್. ಒಂದಷ್ಟು ವರ್ಷಗಳ ಕಾಲ ಇಲ್ಲಿ ಸಕ್ರಿಯರಾಗಿದ್ದ ಅವರು ಕೈಲಾಸ ಕಾಸಿದ್ರೆ ಚಿತ್ರದ ಮೂಲಕ, ಯೂಥ್ ಫುಲ್ ಕಥೆಯೊಂದಿಗೆ ಆಗಮಿಸಿದ್ದಾರೆ. ಈ ಹಿಂದೆ ತಾರಕಾಸುರ ಚಿತ್ರದ ಮೂಲಕ ಮಿಂಚಿದ್ದ ರವಿ ಕೈಲಾಸದಲ್ಲಿ ಮತ್ತೊಂದು ಭಿನ್ನ ಲುಕ್ಕಿನೊಂಡಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಒಟ್ಟಾರೆ ಕಥೆ, ವಿಶೇಷತೆಗಳ ಬಗ್ಗೆ ನಿರ್ದೇಶಕ ನಾಗ್ ವೆಂಕಟ್ ಒಂದಷ್ಟು ವಿಚಾರಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.
ಈವತ್ತಿಗೆ ಒಂದಿಡೀ ಯುವ ಸಮುದಾಯವನ್ನು ಡ್ರಗ್ಸ್ ನಂಥಾ ವ್ಯಸನಗಳು ಅಪಾಯದಂಚಿಗೆ ಕೊಂಡೊಯ್ದು ನಿಂತಿವೆ. ಇದೀಗ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಆಗಾಗ ಇಂಥಾ ಡ್ರಗ್ಸ್ ಕೇಸುಗಳು ಸದ್ದು ಮಾಡುತ್ತಿವೆ. ಈ ಹೊತ್ತಿನಲ್ಲಿ ಡ್ರಗ್ಸ್ ಲೋಕದ ಅಚ್ಚರಿದಾಯಕ ಸಂಗತಿಗಳನ್ನು ಹೊತ್ತು ಬರುತ್ತಿರುವ ಚಿತ್ರ ಕೈಲಾಸ. ಹಾಗಂತ ಇಲ್ಲಿ ಯಾವ ಬೋಧನೆಯನ್ನೂ ಮಾಡಿಲ್ಲ. ಕಥೆಯ ಮೂಲಕವೇ ಸಂದೇಶಗಳು ರವಾನೆಯಾಗುತ್ತಷ್ಟೆ. ಸಿನಿಮಾ ಎಂದರೆ ಮನೋರಂಜನೆ. ಅದು ಬೋಧನೆಯ ಮಾಧ್ಯಮವಲ್ಲ. ಆದರೆ, ಕಥೆಯ ಓಘದಲ್ಲಿಯೇ ಎಚ್ಚರ ರವಾನಿಸುವ ಕೆಲಸ ಮಾಡಬಹುದಷ್ಟೇ ಎಂಬ ನಿಖರ ಮಾತುಗಳನ್ನಾಡುವ ನಾಗ್ ವೆಂಕಟ್ ಅತ್ಯಂತ ವೇಗವಾಗಿ ಚಲಿಸುವಂತೆ ಈ ಸಿನಿಮಾವನ್ನು ರೂಪಿಸಿದ್ದಾರಂತೆ. ಇದೆಲ್ಲದರ ಜೊತೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾತ್ರ ಚಿತ್ರದ ತುಂಬೆಲ್ಲ ಕ್ಯಾರಿ ಆಗುತ್ತದೆ. ಆ ಮೂಲಕ ಆರಂಭದಿಂದ ಕೊನೆಯವರೆಗೂ ನಗುವಿಗೆ ತತ್ವಾರವಿಲ್ಲದಂತೆ ಈ ಸಿನಿಮಾ ಮೂಡಿ ಬಂದಿದೆಯಂತೆ.
ಈಗ ಏಕಾಏಕಿ ಕಾಸು ಮಾಡಿ ಬಿಡಬೇಕೆಂಬ ಮನಃಸ್ಥಿತಿ ಯುವ ಸಮುದಾಯವನ್ನು ಆವರಿಸಿಕೊಂಡಿದೆ. ಇಂಥಾದ್ದೊಂದು ಸನ್ನಿ ಕಾಲೇಜು ದಿನಮಾನವನ್ನೂ ಆವರಿಸಿಕೊಂಡಿದೆ. ಇಂಥಾ ಕಾಲೇಜು ವಾತಾವರಣದಲ್ಲಿ ಘಟಿಸುವ ಯೂಥ್ ಫುಲ್ ಕಥಾನಕ ಈ ಚಿತ್ರದಲ್ಲಿದೆ. ಹಠಾತ್ತನೆ ಕಾಸು ಮಾಡುವ ಹಾದಿ, ನಶೆಯ ಲೋಕ ಮತ್ತು ಅದರ ಹಿಮ್ಮೇಳದಲ್ಲಿರುವ ಪ್ರೀತಿ… ಇವಿಷ್ಟನ್ನೂ ಪಕ್ಕಾ ಮನೋರಂಜನಾತ್ಮಕವಾಗಿ ಕಟ್ಟಿ ಕೊಟ್ಟಿರುವ ತೃಪ್ತಿ ನಾಗ್ ವೆಂಕಟ್ ಅವರಲ್ಲಿದೆ. ಎರಡು ಗಂಟೆಗಳು ಸರಿದದ್ದೇ ಗೊತ್ತಾಗದಂತೆ ಇಲ್ಲಿನ ದೃಷ್ಯಗಳು ಕದಲುತ್ತವೆಂಬ ಭರವಸೆಯೂ ಅವರ ಕಡೆಯಿಂದ ರವಾನೆಯಾಗುತ್ತದೆ.
ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟಾರೆಯಾಗಿ, ಕೈಲಾಸ ಕಾಸಿದ್ರೆ ಚಿತ್ರ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದೇ ಮಾರ್ಚ್ 8ನೇ ತಾರೀಕಿನಂದು ಈ ಸಿನಿಮಾ ತೆರೆಗಾಣಲಿದೆ.