ಶಿವಣ್ಣ ಭಜರಂಗಿಯಾಗಿ ಮತ್ತೆ ಅಬ್ಬರಿಸೋದು ಪಕ್ಕಾ!

Public TV
1 Min Read

ಬೆಂಗಳೂರು: ಯುವ ನಿರ್ದೇಶಕ ಎ ಹರ್ಷ ಮತ್ತೆ ಶಿವರಾಜ್ ಕುಮಾರ್ ಅವರ ಜೊತೆಗೊಂದು ಚಿತ್ರ ಮಾಡುತ್ತಾರೆಂಬ ಸುದ್ದಿ ಬಹಳಷ್ಟು ಹಿಂದೆಯೇ ಹಬ್ಬಿಕೊಂಡಿತ್ತು. ಬಳಿಕ ಅದು ನಿಜವಾದಂತಾಗಿ ಆ ಚಿತ್ರಕ್ಕೆ ಮೈ ನೇಮ್ ಈಸ್ ಆಂಜಿ ಅಂತ ನಾಮಕರಣವಾಗಿರೋದರ ಬಗ್ಗೆಯೂ ಸುದ್ದಿ ಹರಡಿತ್ತು. ಆ ಬಳಿಕ ಈ ಪ್ರಾಜೆಕ್ಟಿಗೆ ಭಜರಂಗಿ 2 ಎಂಬ ಟೈಟಲ್ಲು ಫಿಕ್ಸಾಗಿ ಇದೀಗ ಖುದ್ದು ಶಿವಣ್ಣನೇ ಈ ಚಿತ್ರದ ಚಿತ್ರೀಕರಣಕ್ಕೆ ಹೊರಡೋ ಉತ್ಸಾಹದಲ್ಲಿದ್ದಾರೆ.

ಎ.ಹರ್ಷ ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶನ ಮಾಡುತ್ತಿದ್ದ ಸಂದರ್ಭದಲ್ಲಿಯೇ ಶಿವಣ್ಣನೊಂದಿಗಿನ ಚಿತ್ರದ ಬಗ್ಗೆ ಗುಲ್ಲೆದ್ದಿತ್ತು. ಹರ್ಷ ಸೀತಾರಾಮ ಕಲ್ಯಾಣ ಮುಗಿಸಿಕೊಂಡವರೇ ಸೀದಾ ಶಿವಣ್ಣನ ಬಳಿ ಹೋಗಿ ಈ ಕಥೆಯನ್ನು ಹೇಳಿದ್ದರಂತೆ. ಶಿವಣ್ಣ ಕೂಡಾ ಖುಷಿಯಿಂದ ಒಪ್ಪಿಗೆ ಸೂಚಿಸುತ್ತಲೇ ಸ್ಕ್ರಿಪ್ಟ್ ಕೆಲಸಕ್ಕೆ ಪಟ್ಟಾಗಿ ಕೂತಿದ್ದರು. ಇದೀಗ ಎಲ್ಲವನ್ನೂ ಮುಗಿಸಿಕೊಂಡು ಚಿತ್ರೀಕರಣಕ್ಕೆ ತಯಾರಾಗಿದ್ದಾರೆ.

ಎಲ್ಲವೂ ಅಂದುಕೊಂಡಂತೆಯೇ ಆದರೆ ಇದೇ ತಿಂಗಳ ಇಪ್ಪತ್ತನೇ ತಾರೀಕಿನಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ನಡೆಯಲಿದೆ. ಶಿವಣ್ಣನೇ ತಯಾರಾಗಿರೋದರಿಂದ ಆ ಮುಹೂರ್ತದಿಂದಲೇ ಚಿತ್ರೀಕರಣ ಚಾಲೂ ಆಗಲಿದೆ. ವರ್ಷಾಂತರಗಳ ಹಿಂದೆ ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ನಿನಲ್ಲಿ ಭಜರಂಗಿ ಎಂಬ ಚಿತ್ರ ತೆರೆ ಕಂಡಿತ್ತು. ಅದು ಹಿಟ್ ಕೂಡಾ ಆಗಿತ್ತು. ಅದಾದ ನಂತರದಲ್ಲಿ ಹರ್ಷ ಮತ್ತೆ ಶಿವಣ್ಣನ ಜೊತೆ ಕೆಲಸ ಮಾಡಬೇಕೆಂಬ ಹಂಬಲ ಹೊಂದಿದ್ದರಂತೆ. ಆದರೆ ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ.

ಈ ಹಿಂದೆ ಸದರಿ ಚಿತ್ರಕ್ಕೆ ಮೈ ನೇಮ್ ಈಸ್ ಆಂಜಿ ಅನ್ನೋ ಹೆಸರು ಫಿಕ್ಸಾಗಿತ್ತಲ್ಲಾ? ಅದು ಶಿವಣ್ಣನ ಅಭಿಮಾನಿ ಬಳಗಕ್ಕೂ ಹಿಡಿಸಿತ್ತು. ಆದರೆ ಆಂಜನೇಯನ ಪರಮ ಭಕ್ತರಾದ ಎ ಹರ್ಷ ಅವರಿಗೆ ಆ ಟೈಟಲ್ ಸಮಾಧಾನ ತಂದಿರಲಿಲ್ಲ. ನಂತರ ಅಳೆದೂ ತೂಗಿ ಕಡೆಗೂ ಭಜರಂಗಿ 2 ಎಂಬ ಟೈಟಲ್ಲೇ ನಿಕ್ಕಿಯಾಗಿದೆ. ಈ ಚಿತ್ರವೂ ಭಜರಂಗಿಯಂತೆಯೇ ಸೂಪರ್ ಹಿಟ್ ಆಗುವಂತೆ ಮೂಡಿ ಬರಲಿದೆ ಎಂಬ ನಿರೀಕ್ಷೆ ಶಿವಣ್ಣನ ಅಭಿಮಾನಿಗಳಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *