ಚಾಮರಾಜನಗರ: ಕಾವೇರಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿ ಜರುಗಿದೆ.
ಮೂಲತಃ ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಹರ್ಷ ಮೃತ ದುರ್ದೈವಿ. ಹರ್ಷ ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದನು. ಬುಧವಾರ ಆರು ಜನ ಸ್ನೇಹಿತರೊಂದಿಗೆ ಚಾಮರಾಜನಗರ ಜಿಲ್ಲಾ ಪ್ರವಾಸಕ್ಕೆ ಮನೆಯಿಂದ ಬಂದಿದ್ದಾನೆ.
ಸ್ನೇಹಿತರೆಲ್ಲರು ಕೊಳ್ಳೇಗಾಲದ ಶಿವನಸಮುದ್ರದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಧುಮುಕಿದ್ದಾರೆ. ಆದರೆ ಹರ್ಷ ನೀರಿನಲ್ಲಿ ಸಿಲುಕಿಕೊಂಡಿದ್ದು, ನಂತರ ಸ್ನೇಹಿತರು ಹುಡುಕಾಡಿದ್ದಾರೆ. ಆದರೆ ಹರ್ಷನ ಸುಳಿವು ಸಿಗಲಿಲ್ಲ. ನಂತರ ಸ್ನೇಹಿತರು ಗಾಬರಿಯಿಂದ ಬಂದು ಅಲ್ಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರು ಈ ಬಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸ್ಥಳಕ್ಕೆ ಬಂದು ನೀರಿನಲ್ಲಿ ಶೋಧ ನಡೆಸಿ ಇಂದು ಹರ್ಷನ ಮೃತ ದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.