ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ಆಡುವರೇ ದಿನೇಶ್ ಕಾರ್ತಿಕ್?

Public TV
2 Min Read

ಮುಂಬೈ: 15ನೇ ಆವೃತ್ತಿ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಪರ ಆಡುವ ಹುಮ್ಮಸ್ಸಿನಲ್ಲಿದ್ದಾರೆ.


ಹೌದು ಆರ್​ಸಿಬಿ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸುತ್ತಿರುವ ಕಾರ್ತಿಕ್ ಆರ್​ಸಿಬಿ ತಂಡದ ಮ್ಯಾಚ್ ಫಿನಿಶರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳನ್ನು ಆಡಿ 209.57 ಸ್ಟ್ರೈಕ್‍ರೇಟ್‍ನಲ್ಲಿ 197 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಪ್ರದರ್ಶನ ಇದೀಗ ಟೀಂ ಇಂಡಿಯಾ ಪರ ಮತ್ತೆ ಕಾಣಿಸಿಕೊಳ್ಳುವ ಕಾರ್ತಿಕ್ ಕನಸಿಗೆ ಜೀವ ತುಂಬಿದೆ. ಇದನ್ನೂ ಓದಿ: IPLನಲ್ಲಿ ಪಂದ್ಯ ನೂರು, ಶತಕ ಮೂರು ಸಿಡಿಸಿ ಮೆರೆದಾಡಿದ ಕನ್ನಡಿಗ ಕೆ.ಎಲ್.ರಾಹುಲ್

2022ರ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಟಿ20 ವಿಶ್ವಕಪ್‍ಗೆ ಭಾರತದ ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿ ಬಿಸಿಸಿಐ ಇದೆ. ಹಾಗಾಗಿ ಬಿಸಿಸಿಐ ಈ ಬಾರಿಯ ಐಪಿಎಲ್‍ನಲ್ಲಿ ಆಟಗಾರರ ಪ್ರದರ್ಶನದ ಬಗ್ಗೆ ಗಮನಹರಿಸಿದೆ. ಈ ಬಾರಿ ಐಪಿಎಲ್‍ನಲ್ಲಿ ಕಾರ್ತಿಕ್ ಅಬ್ಬರಿಸುತ್ತಿರುವುದನ್ನು ಗಮನಿಸುತ್ತಿರುವ ಬಿಸಿಸಿಐ ಆಯ್ಕೆ ಸಮಿತಿ ಕಾರ್ತಿಕ್‍ಗೆ ಮಣೆಹಾಕಿದರೂ ಅಚ್ಚರಿ ಪಡಬೇಕಾಗಿಲ್ಲ. ಇದನ್ನೂ ಓದಿ: ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ – ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

ಈ ನಡುವೆ ಕಾರ್ತಿಕ್ ಕೂಡ ಟೀಂ ಇಂಡಿಯಾ ಪರ ಆಡುವ ಬಯಕೆ ವ್ಯಕ್ತಪಡಿಸಿದ್ದು, ನನ್ನ ಕನಸು ದೊಡ್ಡದಿದೆ. ಅದನ್ನು ಸಾಧಿಸುವ ಸಲುವಾಗಿ ಕಠಿಣ ಪರಿಶ್ರಮ ಪಡುತ್ತಿದ್ದೇನೆ. ದೇಶಕ್ಕಾಗಿ ವಿಶೇಷ ಸಾಧನೆ ಮಾಡಬೇಕು ಎಂಬುದು ನನ್ನ ಬಹುದೊಡ್ಡ ಗುರಿ. ಈ ಪಯಣದಲ್ಲಿ ಇಂದೊಂದು ಭಾಗವಷ್ಟೆ. ಟೀಮ್ ಇಂಡಿಯಾ ಪರ ಮತ್ತೆ ಆಡುವುದಕ್ಕಾಗಿ ಸಕಲ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬೆನ್ ಸ್ಟೋಕ್ಸ್‌ಗೆ ಒಲಿಯುವುದೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ?

2004ರಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದ ಕಾರ್ತಿಕ್ ಆ ಬಳಿಕ ಆಗೊಮ್ಮೆ, ಈಗೊಮ್ಮೆ ತಂಡದಲ್ಲಿ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ಈ ಹಿಂದೆ ಟೀಂ ಇಂಡಿಯಾದಲ್ಲಿ ಧೋನಿ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಖಾಯಂ ಸದಸ್ಯರಾಗಿದ್ದರಿಂದಾಗಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಧೋನಿ ನಿವೃತ್ತಿ ಗೊಂಡಿರುವುದರಿಂದ ಕಾರ್ತಿಕ್ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಕಾರ್ತಿಕ್ 2019ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಬಾರಿಗೆ ಆಡಿದ್ದರು. ಆ ಬಳಿಕ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಡಿಕೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವರೇ ಎಂಬ ಚರ್ಚೆ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *