ಕಾಂಗ್ರೆಸ್ ಟೀಕಿಸುತ್ತಿರುವ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದ ದಿನೇಶ್ ಗುಂಡೂರಾವ್

Public TV
2 Min Read

ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ನೀಡುತ್ತಿರುವ ಬೆಂಬಲ, ನಿಮ್ಮ ಪಕ್ಷದ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಯಾಕೆ ನೀಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅವರ ಸಾಧನೆ ಏನು ಇಲ್ಲ. ಕೆಲವು ಪ್ರಮುಖ ವಿಚಾರಗಳ ಬಗ್ಗೆ ನಾನು ಮೋದಿ ಅವರನ್ನ ಕೇಳುತ್ತೇನೆ. ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಮೋದಿ ಅವರೇ ನೀವು ಮಂಡ್ಯ ಪಕ್ಷೇತರ ಅಭ್ಯರ್ಥಿ ಬಗ್ಗೆ ಬೆಂಬಲ ಸೂಚಿಸಿ ಭಾಷಣ ಮಾಡಿದ್ದೀರಾ, ಅಂಬರೀಶ್ ಅವರ ಹೆಸರು ಬಳಸಿ ಅಲ್ಲಿಯ ಅಭ್ಯರ್ಥಿ ಬಗ್ಗೆ ಬೆಂಬಲ ಸೂಚಿಸಿದ್ದೀರಾ. ಆದ್ರೆ ನಿಮ್ಮದೇ ಪಕ್ಷದವರಾದ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನು ಯಾಕೆ ಮರೆತಿದ್ದೀರಿ? ಅನಂತ್‍ಕುಮಾರ್ ಅವರು ಬಿಜೆಪಿಯಲ್ಲಿ ನಿಮಗಿಂತಲೂ ದೊಡ್ಡ ನಾಯಕರಾಗಿದ್ದವರು. ಅವರ ಬಗ್ಗೆ ಎಲ್ಲೂ ಯಾಕೆ ಉಲ್ಲೇಖ, ಸ್ಮರಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿ ಕಿಡಿಕಾರಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2ಜಿ ಹಗರಣ ನಡೆದಿದ್ದು ಎಂದು ಭಾಷಣ ಮಾಡಿದ್ರಿ. ಆದ್ರೆ ಬಳಿಕ ನಿಮ್ಮದೇ ಸರ್ಕಾರ ಇತ್ತು, ಆಗ ಯಾಕೆ ಅದು ಹಗರಣ ಅಂತ ಪ್ರೂ ಮಾಡಲಿಲ್ಲ? ನೀವು ಯಾಕೆ ರಫೇಲ್ ಹಗರಣ ಬಗ್ಗೆ ಮಾತನಾಡುತ್ತಿಲ್ಲ? ಹೃದಯಾಂತರಾಳದಲ್ಲಿ ನೋವು ಹುದುಗಿದೆ ಎಂದು ಭಾಷಣ ಮಾಡಿದ್ದೀರಿ. ಉಗ್ರರು ಪಠಾಣ್‍ಕೋಟ್ ಮೇಲೆ ನಡೆಸಿದ ದಾಳಿ ಸೇರಿ ಹಲವಾರು ದಾಳಿ ನಿಮ್ಮ ಆಡಳಿತದಲ್ಲಿ ಆಗಿದೆ. ನಿಮ್ಮ ಕಾಲದಲ್ಲಿ ನಡೆದ ದಾಳಿಯಲ್ಲಿ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ, ಅದರಲ್ಲೂ ಕಾಶ್ಮೀರದಲ್ಲಿ ನಾಗರಿಕರು ಸಾವನ್ನಪ್ಪಿದರು. ಬಿಜೆಪಿ ಅವಧಿಯಲ್ಲಿ 428 ಸೈನಿಕರು ಮೃತಪಟ್ಟಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ದಿನನಿತ್ಯ ದಾಳಿ ನಡೆಯುತ್ತಲೇ ಇದೆ. ಇದಕ್ಕೆಲ್ಲಾ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿದರು.

`ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಅಂತ ಹೇಳುತ್ತಿರಿ ಆ ರೀತಿ ಯಾವುದು ಆಗಿಲ್ಲ. 28 ಕ್ಷೇತ್ರದಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಗಳಿಗೆ ಒಂದು ಸೀಟ್ ನೀಡಿಲ್ಲ. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರನ್ನು ಬಿಜೆಪಿ ಕಡೆಗಣಿಸಿದ್ದು ಯಾಕೆ? `ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಬರೀ ಭಾಷಣಕ್ಕೆ ಸೀಮಿತ. ನೀವು ವಿಷಯಾಧಾರಿತ ಭಾಷಣ ಯಾಕೆ ಮಾಡುತ್ತಿಲ್ಲ? ಬರೀ ಸುಳ್ಳು ಭಾಷಣಗಳನ್ನು ಮಾಡುತ್ತೀರಿ. ಪತ್ರಕರ್ತರನ್ನು ಉದ್ದೇಶಿಸಿ ನೀವು ಒಂದು ದಿನವೂ ಮಾತನಾಡಿಲ್ಲ. ನನ್ನ ಪ್ರಶ್ನೆಗಳಿಗೆ ಮೋದಿ ಅವರಿಗೆ ಉತ್ತರ ಕೊಡಲು ಆಗುವುದಿಲ್ಲ. ಆದರೂ ಜನರಿಗಾಗಿ ನಾನು ಮೋದಿಗೆ ಪ್ರಶ್ನೆ ಕೇಳ್ತಿದ್ದೇನೆ. ನಾಳೆ ಮೋದಿ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ಅಂದುಕೊಂಡಿದ್ದೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *