ಡಿಕೆಶಿ ಒಬ್ಬರೇ ಎಂಎಲ್‌ಎ ಟಿಕೆಟ್‌ ನೀಡಲು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ: ದಿನೇಶ್‌ ಗುಂಡೂರಾವ್‌

Public TV
3 Min Read

ಬೆಂಗಳೂರು: ಯಾರೇ ಆಗಲಿ.. ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದರೆ, ಅದು ಕಾಂಗ್ರೆಸ್‍ನಲ್ಲಿ ಸಾಧ್ಯವಿಲ್ಲ. ಇದೆಲ್ಲವೂ ಒಬ್ಬರ ಕೈಯಲ್ಲಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಿರುದ್ದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ (Dinesh Gundurao) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಡಿ.ಕೆ. ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಗಲಾಟೆ, ಗೊಂದಲ ಇಲ್ಲ. ಎಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರು ಒಟ್ಟಾಗಿ ಕೆಲಸ ಮಾಡುತ್ತಿರುವುದಕ್ಕೆ ಉಪ ಚುನಾವಣೆಯಲ್ಲಿ (By-election) ಗೆಲುವು ಸಿಕ್ಕಿತು. ಪಾದಯಾತ್ರೆ, ಸಿದ್ದರಾಮೋತ್ಸವ ಎಲ್ಲವೂ ಯಶಸ್ವಿಯಾಗಿದೆ. ಎಲ್ಲರೂ ಸೇರಿ ಕೆಲಸ ಮಾಡುತ್ತಿದ್ದೇವೆ. ರಾಜಕೀಯದಲ್ಲಿ (Political) ಸಣ್ಣಪುಟ್ಟ ಗೊಂದಲ ಇರುತ್ತದೆ. ಅದನ್ನು ಸರಿ ಮಾಡಿಕೊಂಡು ಹೋಗುತ್ತೇವೆ ಎಂದಿದ್ದಾರೆ.

ನನ್ನ ಸ್ಪೀಡ್‍ಗೆ ಯಾರು ಕೆಲಸ ಮಾಡುತ್ತಿಲ್ಲ ಎಂಬ ಡಿಕೆಶಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನನ್ನ ಸ್ವೀಡ್‍ಗೆ ಇಲ್ಲ ಅಂದರೆ ಎಲ್ಲರಿಗೂ ಹುರಿದುಂಬಿಸಲು ಹಾಗೆ ಹೇಳಿದ್ದಾರೆ. ಭಾರತ್ ಜೋಡೋ (Bharat Jodo) ಕಾರ್ಯಕ್ರಮ ಯಶಸ್ವಿಯಾಗಲಿ ಅಂತ ಹೇಳಿದ್ದಾರೆ. ಎಲ್ಲರೂ ಚುರುಕಾಗಿ ಕೆಲಸ ಮಾಡಲಿ ಅಂತ ಹೇಳಿದ್ದಾರೆ. ಅದಕ್ಕೆ ಬೇರೆ ಅರ್ಥ ಬೇಡ. ಬೇರೆ ಅರ್ಥದಲ್ಲಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಸಾಧ್ಯವಿಲ್ಲ: ಕೇರಳಕ್ಕೆ ಕರ್ನಾಟಕ ಸರ್ಕಾರ ಸ್ಪಷ್ಟನೆ

ಕೆಲಸ ಮಾಡದೇ ಹೋದರೆ ಟಿಕೆಟ್ ಇಲ್ಲ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ, ಕಾಂಗ್ರೆಸ್‍ನಲ್ಲಿ ಯಾರೋ ಒಬ್ಬರು ಟಿಕೆಟ್ ಬಗ್ಗೆ ತೀರ್ಮಾನ ಮಾಡುವುದಿಲ್ಲ. ಟಿಕೆಟ್ ನೀಡಲು ಚುನಾವಣೆ ಸಮಿತಿ, ರಾಜ್ಯ ಚುನಾವಣೆ ಸಮಿತಿ(State Election Committee), ಕೇಂದ್ರ ಸಮಿತಿ ಇದೆ. ಸ್ಕ್ರೀನಿಂಗ್ ಕಮಿಟಿ ಇದೆ. ಎಲ್ಲರ ಅಭಿಪ್ರಾಯ ಪಡೆದು ಅಂತಿಮವಾಗಿ ಹೈಕಮಾಂಡ್(High Command) ಟಿಕೆಟ್ ಘೋಷಣೆ ಮಾಡುತ್ತದೆ. ಯಾರೋ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದರೆ, ಅದು ಕಾಂಗ್ರೆಸ್‍ನಲ್ಲಿ(Congress) ಸಾಧ್ಯವಿಲ್ಲ. ಇದೆಲ್ಲವೂ ಒಬ್ಬರ ಕೈಯಲ್ಲಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಖೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಂಡು ಜೈಲು ಅಧೀಕ್ಷಕನ ಅಂದಾ ದರ್ಬಾರ್

ಜನರಿಗೆ ಬಿಜೆಪಿ ಬಗ್ಗೆ ಬೇಸರ ಇದೆ. ಭ್ರಷ್ಟಾಚಾರ (Corruption) ತಾಂಡವವಾಡುತ್ತಿದೆ. ರಾಜ್ಯಕ್ಕೆ ಒಳ್ಳೆ ಆಡಳಿತ ಸಿಗಬೇಕು ಅಂತ ಜನ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಅಂತಹ ಆಡಳಿತ ಬೇಕು ಅಂತ ಹೇಳುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಬಾರದು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ಸಮನ್ವಯತೆಯಾಗಿ ಓಡಾಡಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾರೂ ಕೂಡಾ ಗೊಂದಲ ಸೃಷ್ಟಿ ಮಾಡಬಾರದು ಎಂದು ಡಿ.ಕೆ.ಶಿವಕುಮಾರ್‌ಗೆ ಸಲಹೆ ನೀಡಿದ್ದಾರೆ.

ಭಾರತ್ ಜೋಡೋಗೆ ಕಾರ್ಯಕರ್ತರನ್ನ ಕಳುಹಿಸುತ್ತಿಲ್ಲ ಎಂಬ ಡಿ.ಕೆ. ಶಿವಕುಮಾರ್ ಆರೋಪದ ವಿಚಾರವಾಗಿ ಮಾತನಾಡಿದ ಅವರು, ದೇಶಪಾಂಡೆ (RV Deshpande) ಊರು ದೂರ ಇದೆ. ಅಲ್ಲಿಂದ ಸಾವಿರಾರು ಕಾರ್ಯಕರ್ತರನ್ನ ತರುವುದು ಕಷ್ಟ ಅಂತ ದೇಶಪಾಂಡೆ ಹೇಳಿದ್ದಾರೆ. ದೇಶಪಾಂಡೆ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ಹಾಗೆ ಹೇಳಿದ್ದು ತಪ್ಪಲ್ಲ. ಇದೆಲ್ಲ ಸಣ್ಣ ವಿಚಾರ. ಇದನ್ನು ಯಾರು ಗೊಂದಲ ಮಾಡಬಾರದು. ರಾಹುಲ್ ಗಾಂಧಿ ಬಂದ ಮೇಲೆ ಎಲ್ಲರೂ ಸಹಕಾರ ಕೊಡುತ್ತಾರೆ. ಶಾಸಕರು ಕೈಯಲ್ಲಿ ಆದಷ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲರ ಶಕ್ತಿ ಒಂದೇ ಎನ್ನುವುದಕ್ಕೆ ಆಗುವುದಿಲ್ಲ. ಕೆಲಸ ಮಾಡಿಲ್ಲ ಎನ್ನುವವರಿಗೆ ಟಿಕೆಟ್ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಏನೋ ಭರಾಟೆಯಲ್ಲಿ ಹೇಳಿದ್ದಾರೆ. ಅವರು ಹೇಳಿದರೆ ಹಾಗೆ ಆಗುವುದಿಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಸಿಎಂ ಅಭ್ಯರ್ಥಿ ಮತ್ತು ಸಿದ್ದರಾಮಯ್ಯ ಪ್ರಚಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಹೋಗಬೇಕು. ಸಣ್ಣಪುಟ್ಟ ಗೊಂದಲ ದೊಡ್ಡದು ಮಾಡಬಾರದು. ಎಲ್ಲರೂ ಸೇರಿ ಸಭೆ ಮಾಡಿ ಪ್ರಚಾರದ ಬಗ್ಗೆ ನಿರ್ಧಾರ ಮಾಡುತ್ತಾರೆ. ಪ್ರಚಾರ ಸಮಿತಿ ಅಧ್ಯಕ್ಷರು ಇದ್ದಾರೆ. ಅವರು ಎಲ್ಲರೊಂದಿಗೆ ಸಭೆ ನಡೆಸಿ ನಿರ್ಧಾರ ಮಾಡುತ್ತಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಚಾರ ನಡೆಯಬೇಕು. ಡಿಕೆಶಿವಕುಮಾರ್, ಖರ್ಗೆ, ಪರಮೇಶ್ವರ ಎಲ್ಲರೂ ಇದ್ದಾರೆ. ಎಲ್ಲರೂ ಪ್ರಚಾರ ಮಾಡಬೇಕು. ಸಿಎಂ ಯಾರು ಆಗಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಆಯ್ಕೆ ಮಾಡುವಾಗ ಶಾಸಕರ ಅಭಿಪ್ರಾಯ ಪಡೆಯಲಾಗುತ್ತದೆ. ಸಿಎಲ್‍ಪಿ ಸಭೆ ಆಗುತ್ತದೆ. ಅಲ್ಲಿ ಸಿಎಂ ನಿರ್ಧಾರ ಮಾಡುತ್ತಾರೆ. ಹೈಕಮಾಂಡ್ ಎಲ್ಲವನ್ನು ನಿರ್ಧಾರ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *