‘ಡಿಜಿಟಲ್ ಗೋಲ್ಡ್’ ಬಗ್ಗೆ ನಿಮಗೆಷ್ಟು ಗೊತ್ತು?- ಹೂಡಿಕೆ ಮಾಡ್ತಿದ್ದೀರಾ? – ಹಾಗಾದ್ರೆ ಎಚ್ಚರ!

Public TV
5 Min Read

ಚಿನ್ನ ಅಚ್ಚುಮೆಚ್ಚಿನ ಲೋಹ. ಅಲಂಕಾರ ಪ್ರಿಯರಿಗೆ ಆಭರಣವಾಗಿಯೂ, ಹೂಡಿಕೆದಾರರಿಗೆ ಲಾಭದ ವಸ್ತುವಾಗಿಯೂ ಬಹು ಬೇಡಿಕೆಯನ್ನು ಹೊಂದಿದೆ. ಹೀಗಾಗಿ, ಚಿನ್ನದ ಮೇಲಿನ ಹೂಡಿಕೆ ನಿತ್ಯ ನಿರಂತರವಾಗಿದೆ. ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಈ ವಲಯದಲ್ಲೇ ಲಾಭ ಗಳಿಸುವುದು ಈಗಿನ ಟ್ರೆಂಡ್. ಚಿನ್ನವನ್ನೂ ಸಹ ಈ ವಲಯಕ್ಕೆ ಒಗ್ಗಿಸಿಕೊಳ್ಳಲಾಗಿದೆ. ಹಾಗಾಗಿ, ಅನಿಯಂತ್ರಿತ ಡಿಜಿಟಲ್ ಚಿನ್ನದ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಟ್ರೆಂಡ್ ಹೆಚ್ಚುತ್ತಿರುವುದನ್ನು ಕಂಡು ಅಚ್ಚರಿಗೊಂಡಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ‘ಡಿಜಿಟಲ್ ಗೋಲ್ಡ್’ನಲ್ಲಿ (Digital Gold) ಹೂಡಿಕೆ ಮಾಡುವವರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.

ಅಷ್ಟಕ್ಕೂ ಏನಿದು ಡಿಜಿಟಲ್ ಹೂಡಿಕೆ? ಇದರ ಕಡೆಗೆ ಹೂಡಿಕೆದಾರರು ಆಕರ್ಷಿತರಾಗುತ್ತಿರುವುದು ಯಾಕೆ? ಡಿಜಿಟಲ್ ಗೋಲ್ಡ್ ಭಾರತದ ನೆಚ್ಚಿನ ಹೂಡಿಕೆಯಾಗಿ ಹೇಗೆ ಮಾರ್ಪಟ್ಟಿತು? ಹೂಡಿಕೆ ಬಗ್ಗೆ ಎಚ್ಚರ ವಹಿಸುವಂತೆ ಸೆಬಿ ಎಚ್ಚರಿಸಿರುವುದು ಏಕೆ? ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

ಡಿಜಿಟಲ್ ಗೋಲ್ಡ್ ಹಾಗೆಂದರೇನು?
ಚಿನ್ನ ಬೇಕು ಎನ್ನುವವರು ಸಾಮಾನ್ಯವಾಗಿ ಆಭರಣ ಮಳಿಗೆಗೆ ಹೋಗಿ ಖರೀದಿಸುತ್ತಾರೆ. ಮನೆಯಲ್ಲಿ ಚಿನ್ನ ಇದ್ದರೆ ಕಷ್ಟ ಕಾಲಕ್ಕೆ ಆಗುತ್ತೆ ಅನ್ನೋದೆ ಹೆಚ್ಚಿನವರ ಭಾವನೆ. ಅದಕ್ಕಾಗಿ ಹೆಚ್ಚಿನ ಹಣ ಕೂಡಿಟ್ಟು ಚಿನ್ನ ಖರೀದಿಸುತ್ತಾರೆ. ಈಗ ಅದಕ್ಕೆ ಪರ್ಯಾಯ ವ್ಯವಸ್ಥೆಯೊಂದಿದೆ. ಅದುವೇ ಡಿಜಿಟಲ್ ಗೋಲ್ಡ್ ಹೂಡಿಕೆ. ಇದು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯಾಗಿರುತ್ತದೆ. ನಾವು ಆನ್‌ಲೈನ್ ಮೂಲಕ ಚಿನ್ನವನ್ನು ಖರೀದಿಸಬಹುದು. ಅದಕ್ಕೆ ಸಮನಾದ ಮೊತ್ತವನ್ನು ವಿಮೆ ಮಾಡಿದ ವ್ಯಾಲೆಟ್‌ನಲ್ಲಿ ಭೌತಿಕ ಚಿನ್ನದ ರೂಪದಲ್ಲೇ ಇಡಲಾಗುತ್ತದೆ. 10 ರೂ.ನಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಹೂಡಿಕೆಯ ಚಿನ್ನವನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಹೂಡಿಕೆ ಮಾಡಿದ ಚಿನ್ನವನ್ನು ಕ್ಯಾಶ್ ಆಗಿ ಪರಿವರ್ತಿಸಿಕೊಳ್ಳಬಹುದು.

ಹೂಡಿಕೆ ಹೇಗೆ? ಪ್ರಯೋಜನ ಏನು?
ಯುಪಿಐ ವಹಿವಾಟು ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಚಿನ್ನದ ಆಯ್ಕೆಯಲ್ಲಿ ಆನ್‌ಲೈನ್ ಹೂಡಿಕೆ ಮಾಡಬಹುದು. ನೀವು ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಖರೀದಿಸಿದಾಗ, ಮಾರಾಟಗಾರರು ಅದನ್ನು ಬ್ಯಾಂಕ್ ದರ್ಜೆಯ ಸುರಕ್ಷಿತ ವ್ಯಾಲೆಟ್‌ಗಳಲ್ಲಿ ಸಂಗ್ರಹಿಸುತ್ತಾರೆ. ಸೆಬಿ ನಿಯಂತ್ರಿತ ಚಿನ್ನದ ಹೂಡಿಕೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆ ಇರುತ್ತದೆ. ಇಲ್ಲಿ ಲೋಹದ ಶುದ್ಧತೆ ಖಾತರಿ ಪಡಿಸಬಹುದು. ಕಡಿಮೆ ಮೊತ್ತದಿಂದಲೇ ಹೂಡಿಕೆಯನ್ನು ಮಾಡಬಹುದು. ಭೌತಿಕ ಚಿನ್ನವನ್ನು ಸಂಗ್ರಹಿಸಲು ಬ್ಯಾಂಕ್ ಲಾಕರ್ ಅನ್ನು ಆರಿಸಿಕೊಂಡರೆ, ಮಾಸಿಕ ಬಾಡಿಗೆ ಪಾವತಿಸಬೇಕಾಗುತ್ತದೆ. ಆದರೆ, ಡಿಜಿಟಲ್ ಚಿನ್ನದ ಹೂಡಿಕೆಯಲ್ಲಿ ಶೇಖರಣಾ ವೆಚ್ಚ ಇರುವುದಿಲ್ಲ. ಡಿಜಿಟಲ್ ಗೋಲ್ಡನ್ನು ಖರೀದಿಸುವುದು, ಮಾರಾಟ ಮಾಡುವುದು ಸುಲಭವಾಗಿರುತ್ತದೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ಗೆ ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ವ್ಯವಹಾರವೇ ಸ್ಥಗಿತ

ಹೆಚ್ಚುತ್ತಿದೆ ಆಮಿಷ
ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವವರಿಗೆ ಸುರಕ್ಷಿತ ಮತ್ತು ಕಾನೂನುಬದ್ಧ ಆಯ್ಕೆಗಳಿವೆ. ಇದರ ಮಧ್ಯೆ ಹಲವಾರು ಡಿಜಿಟಲ್ ಮತ್ತು ಆನ್‌ಲೈನ್ ವೇದಿಕೆಗಳು ಈಗ ‘ಡಿಜಿಟಲ್ ಗೋಲ್ಡ್’ ಅಥವಾ ‘ಇ-ಗೋಲ್ಡ್ ಉತ್ಪನ್ನಗಳು’ ಅಂತ ಕರೆ ನೀಡುತ್ತಿವೆ. ಹೂಡಿಕೆದಾರರಿಗೆ ಆಮಿಷ ಕೂಡ ಒಡ್ಡುತ್ತಿವೆ. ಈ ವೇದಿಕೆಗಳು ಅನುಕೂಲತೆ ಮತ್ತು ಸಣ್ಣ-ಟಿಕೆಟ್ ಹೂಡಿಕೆಗಳನ್ನು ಹೈಲೈಟ್ ಮಾಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇಂತಹ ಕೆಲ ವೇದಿಕೆಗಳು ಸೆಬಿಯ ಮೇಲ್ವಿಚಾರಣೆಗೆ ಒಳಪಟ್ಟಿಲ್ಲ. ಇದರರ್ಥ ಅವುಗಳನ್ನು ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ಸರಕು ಉತ್ಪನ್ನಗಳಾಗಿ ನಿಯಂತ್ರಿಸಲಾಗುವುದಿಲ್ಲ. ಈ ಡಿಜಿಟಲ್ ಚಿನ್ನದ ಉತ್ಪನ್ನಗಳು ಸಂಪೂರ್ಣವಾಗಿ ತನ್ನ ವ್ಯಾಪ್ತಿಯಿಂದ ಹೊರಗೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನಿಯಂತ್ರಿತ ಹೂಡಿಕೆಗಳಿಗೆ ಅನ್ವಯಿಸುವ ನಿಯಮಗಳು ಅಥವಾ ರಕ್ಷಣೆಯಿಂದ ಕೂಡಿರುವುದಿಲ್ಲ. ಈ ಬಗ್ಗೆ ಹೂಡಿಕೆದಾರರು ಎಚ್ಚರಿಕೆ ವಹಿಸಬೇಕೆಂದು ಸೆಬಿ ತಿಳಿಸಿದೆ.

ಡಿಜಿಟಲ್ ಚಿನ್ನ ಹೇಗೆ ಕಾರ್ಯನಿರ್ವಹಿಸುತ್ತೆ?
ಸುಮಾರು ಒಂದು ದಶಕದಿಂದ, MMTC-PAMP, SafeGold ಮತ್ತು Paytm ನಂತಹ ವೇದಿಕೆಗಳು ಡಿಜಿಟಲ್ ಚಿನ್ನವನ್ನು ಮಾರಾಟ ಮಾಡುತ್ತಿವೆ. ಈ ಉತ್ಪನ್ನಗಳು ಅನಿಯಂತ್ರಿತವಾಗಿದ್ದರೂ, ಅವು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿವೆ. ಕಾಲಾನಂತರದಲ್ಲಿ, ಅವು SEBI ಅಥವಾ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಔಪಚಾರಿಕ ಮೇಲ್ವಿಚಾರಣೆಯಿಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆದಾರರನ್ನು ಒಳಗೊಳ್ಳುತ್ತಿವೆ.

ಭಾರತದಲ್ಲಿ ಡಿಜಿಟಲ್ ಚಿನ್ನದ ಮಾರುಕಟ್ಟೆ ಈಗ ಎಷ್ಟು ದೊಡ್ಡದಾಗಿದೆ?
ಮಾರುಕಟ್ಟೆಯು 10,000 ಕೋಟಿಗೂ ಹೆಚ್ಚು ಚಲಾವಣೆಯಲ್ಲಿದೆ. ಲಕ್ಷಾಂತರ ಹೂಡಿಕೆದಾರರು ಭಾಗವಹಿಸುತ್ತಿದ್ದಾರೆ. ಈ ಹೂಡಿಕೆದಾರರಲ್ಲಿ ಹಲವರು ಡಿಜಿಟಲ್ ಚಿನ್ನದ ಉತ್ಪನ್ನಗಳು ಸೆಬಿಯ ಮೇಲ್ವಿಚಾರಣೆಯಲ್ಲಿವೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ.

ಸೆಬಿಯ ಎಚ್ಚರಿಕೆ ಏನು?
ಡಿಜಿಟಲ್ ಗೋಲ್ಡ್ ಹೂಡಿಕೆ ಉತ್ಪನ್ನಗಳು ಸೆಬಿ ನಿಯಂತ್ರಿತ ಚಿನ್ನದ ಹೂಡಿಕೆ ಉತ್ಪನ್ನಗಳಿಗಿಂತ ಭಿನ್ನವಾಗಿವೆ. ಇವು ಷೇರು ಅಥವಾ ಸಾಲಪತ್ರದಂತೆ ಅಧಿಸೂಚಿತ ಹೂಡಿಕೆ ಉತ್ಪನ್ನ ಅಲ್ಲ. ಸೆಬಿ ವ್ಯಾಪ್ತಿಯಿಂದ ಹೊರಗೆ ಇವೆ. ಹೀಗಾಗಿ, ಡಿಜಿಟಲ್ ಗೋಲ್ಡ್ ಮೇಲಿನ ಹೂಡಿಕೆಯು ಹೂಡಿಕೆದಾರರಿಗೆ ಅಪಾಯ ತರಬಹುದು. 10,000 ಕೋಟಿಗೂ ಹೆಚ್ಚು ಅನಿಯಂತ್ರಿತ ರೂಪದಲ್ಲಿ ಚಲಾವಣೆಯಾಗುತ್ತಿರುವುದರಿಂದ, ಮಾರುಕಟ್ಟೆಯಲ್ಲಿ ಸ್ಥಿರವಾದ ಪಾರದರ್ಶಕತೆ ಮತ್ತು ಲೆಕ್ಕಪರಿಶೋಧನೆಯ ಕೊರತೆಯಿದೆ. ಕೆಲವು ವೇದಿಕೆಗಳು ಚಿನ್ನದ SIP ಗಳು, ಚಿನ್ನದ ಬೆಂಬಲಿತ ಸಾಲಗಳು ಮತ್ತು ಟೋಕನ್‌ಗಳನ್ನು ಪರಿಚಯಿಸಿವೆ. ಇದು ಭದ್ರತೆಗಳು ಮತ್ತು ಸರಕುಗಳ ನಡುವಿನ ವ್ಯತ್ಯಾಸವನ್ನು ಮಸುಕುಗೊಳಿಸುತ್ತದೆ.

ಸೆಬಿ ಹೇಳೋದೇನು?
ಚಿನ್ನದಲ್ಲಿ ಹೂಡಿಕೆ ಮಾಡಲು ಸುರಕ್ಷಿತ ಮತ್ತು ನಿಯಂತ್ರಿತ ಮಾರ್ಗಗಳಿವೆ. ಮ್ಯೂಚುವ್ ಫಂಡ್ ಕಂಪನಿಗಳು ನೀಡುವ ಚಿನ್ನದ ಇಟಿಎಫ್‌ಗಳು, ಷೇರುಪೇಟೆಗಳ ವಹಿವಾಟಿನಲ್ಲಿ ಬಳಸಬಹುದಾದ ಎಲೆಕ್ಟ್ರಾನಿಕ್‌ ಗೋಲ್ಡ್ ರಿಸಿಪ್ಟ್ಸ್‌ನಂತಹ ಕಾನೂನು ಮಾನ್ಯತೆಯ ಉತ್ಪನ್ನಗಳು, ಸೆಬಿ ನೋಂದಾಯಿತ ಮಧ್ಯವರ್ತಿಗಳ ಮೂಲಕ, ಸೆಬಿಯ ನಿಯಂತ್ರಣ ಇರುವ ಉತ್ಪನ್ನಗಳಲ್ಲಿ ಹೂಡಿಕೆ ಮಾಡಬಹುದು. ಮಂಡಳಿ ಪ್ರಕಾರ, ಈ ಹೂಡಿಕೆಗಳನ್ನು ಸೆಬಿ-ನೋಂದಾಯಿತ ಮಧ್ಯವರ್ತಿಗಳ ಮೂಲಕ ಮಾತ್ರ ಮಾಡಬಹುದು. ಇದು ನಿಯಂತ್ರಿತ ಚೌಕಟ್ಟಿನಲ್ಲಿರುತ್ತದೆ. ಈ ನಿಯಂತ್ರಿತ ಮಾರ್ಗಗಳು ಪಾರದರ್ಶಕತೆ, ಹೂಡಿಕೆದಾರರ ರಕ್ಷಣಾ ಕಾರ್ಯವಿಧಾನಗಳನ್ನು ಒದಗಿಸುತ್ತವೆ. ಅನುಸರಣೆಯನ್ನು ಖಾತರಿಪಡಿಸಲು ಮತ್ತು ಹೂಡಿಕೆದಾರರನ್ನು ರಕ್ಷಿಸಲು ಸೆಬಿ ಮೇಲ್ವಿಚಾರಣೆ ಮಾಡುತ್ತವೆ.

ಎಚ್ಚರ ಯಾಕೆ ವಹಿಸಬೇಕು?
ಆನ್‌ಲೈನ್ ಹೂಡಿಕೆ ಪ್ಲಾಟ್‌ಫಾರ್ಮ್‌ಗಳು ಸಾಮಾನ್ಯ ವ್ಯವಹಾರಗಳಂತೆ ಕಾರ್ಯನಿರ್ವಹಿಸುತ್ತವೆ. ಅವು ಯಾವುದೇ ಹಣಕಾಸು ನಿಯಂತ್ರಕದ ಅಡಿಯಲ್ಲಿ ಬರುವುದಿಲ್ಲ. ಅವರು ಎಷ್ಟು ಚಿನ್ನವನ್ನು ಹೊಂದಿದ್ದಾರೆ? ಅದು ಗ್ರಾಹಕರ ಬ್ಯಾಲೆನ್ಸ್‌ಗಳಿಗೆ ಹೊಂದಿಕೆಯಾಗುತ್ತದೆಯೇ? ಸಂಗ್ರಹಣೆಯು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ಬೆಂಬಲಿತವಾಗಿದೆಯೇ ಎಂಬುದನ್ನು ಬಹಿರಂಗಪಡಿಸಲು ಯಾವುದೇ ಕಾನೂನು ಇಲ್ಲ. ಕೆಲವರು ಲೆಕ್ಕಪರಿಶೋಧನೆಗೆ ಒಳಗಾಗುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಯಾವುದನ್ನೂ ಕಡ್ಡಾಯಗೊಳಿಸಲಾಗಿಲ್ಲ. ಒಂದು ಪ್ರಮುಖ ವೇದಿಕೆಯು ಭರವಸೆ ನೀಡಿದಷ್ಟು ಚಿನ್ನವನ್ನು ನಿಜವಾಗಿಯೂ ಸಂಗ್ರಹಿಸದಿದ್ದರೆ ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಲು ಪ್ರಾರಂಭಿಸಿದರೆ ಬಿಕ್ಕಟ್ಟು ಎದುರಾಗುತ್ತದೆ.

ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಹೇಗೆ ಬದಲಾಯ್ತು?
2005 – 7,000 ರೂ.
2010 – 16,600 ರೂ.
2015 – 26,300 ರೂ.
2020 – 51,619 ರೂ.
2025 1,21,540 ರೂ.

Share This Article