ಜೈಲು ರಹಸ್ಯ ಬೇಧಿಸಿದ ರೂಪಾ ಶೀಘ್ರವೇ ಎತ್ತಂಗಡಿ?

Public TV
3 Min Read

-ತೆಲಗಿ ತಲೆ ಮೇಲಿದೆ 254 ಕೋಟಿ ರೂ. ತೆರಿಗೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ ಸತ್ಯನಾರಾಯಣರಾವ್ ಮತ್ತು ಡಿಐಜಿ ರೂಪಾ ವರ್ಗಾವಣೆ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಮಾಧ್ಯಮದ ಮುಂದೆ ಅಧಿಕಾರಿಗಳು ಪದೇ ಪದೇ ಹೇಳಿಕೆ ನೀಡಬಾರದು ಅಂತ ಸಿಎಂ ಹೇಳಿದ್ದರು. ಪ್ರಕರಣದ ತನಿಖೆ ಪ್ರಾರಂಭಗೊಳ್ಳುವ ಮುನ್ನವೇ ಜೈಲಿಗೆ ಇಬ್ಬರು ಪ್ರವೇಶ ಪಡೆದಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಇಬ್ಬರನ್ನೂ ವರ್ಗಾವಣೆ ಮಾಡಿದ ಬಳಿಕ ಆ ಜಾಗಕ್ಕೆ ಐಜಿಪಿ ಸಲೀಂ ನಿಯೋಜನೆ ಮಾಡುವ ಸಾಧ್ಯತೆಗಳಿವೆ. ಸಲೀಂ ಇಲ್ಲ ಚರಣ್ ರೆಡ್ಡಿ ಗೆ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಇಬ್ಬರು ಅಧಿಕಾರಿಗಳು ಜನವರಿಗೆ ಎಡಿಜಿಪಿ ಆಗಿ ಬಡ್ತಿ ಹೊಂದುವುದರಿಂದ ಅವರನ್ನೇ ಮುಂದುವರೆಸಲು ಸಿದ್ಧತೆ ನಡೆಸಲಾಗಿದೆ ಎಂಬುವುದಾಗಿ ತಿಳಿದುಬಂದಿದೆ.

ಇನ್ನು ಡಿಜಿ ಸತ್ಯನಾರಾಯಣ ರಾವ್ ಅವರು ಡಿಐಜಿ ರೂಪಾ ಬಗ್ಗೆ 16 ಪುಟಗಳ ವರದಿಯನ್ನು ಗೃಹಿಲಾಖೆಗೆ ಸಲ್ಲಿಸಿದ್ದಾರೆ. ಈ ವರದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಡಿಐಜಿ ರೂಪಾ ಅವರು ಡಿಜಿ ಆದೇಶ ಮೀರಿ 3 ಬಾರಿ ನೋಟಿಸ್ ಪಡೆದಿದ್ದರು. ನನ್ನ ಮೇಲೆ ದ್ವೇಷ ಸಾಧಿಸಲು ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ವರದಿಯಲ್ಲೇನಿದೆ?: ಬೆಂಗಳೂರು, ತುಮಕೂರು ಜೈಲಿನ ಜೊತೆ ಹೆಚ್ಚುವರಿ ಜವಬ್ದಾರಿಗೆ ರೂಪಾ ಡಿಮ್ಯಾಂಡ್ ಇಟ್ಟಿದ್ದರು. ಅಲ್ಲದೇ ಬಳ್ಳಾರಿ, ಬೆಳಗಾವಿ, ಧಾರವಾಡ, ಕಲಬುರಗಿ ಜೈಲುಗಳ ಹೊಣೆಗಾಗಿ ರೂಪಾ ಪಟ್ಟು ಹಿಡಿದಿದ್ದರು. ಆದ್ರೆ ಗೃಹ ಇಲಾಖೆ ಅನುಮತಿ ಬೇಕು ಎಂದು ರೂಪಾಗೆ ನಾನು ಬುದ್ಧಿವಾದ ಹೇಳಿದ್ದೆ. ನನಗೆ ತಿಳಿಯದೇ ಗೃಹ ಇಲಾಖೆ ಜೊತೆ ರೂಪಾ ಹೆಚ್ಚಿನ ಅಧಿಕಾರಕ್ಕಾಗಿ ಚರ್ಚೆ ನಡೆಸಿದ್ದರು. ಆಗ ಡಿಜಿಪಿ ಅನುಮತಿ ಪಡೆಯಲು ಗೃಹ ಇಲಾಖೆ ರೂಪಾಗೆ ಸೂಚನೆ ನೀಡಿತ್ತು. ಬಳಿಕ ಡಿಜಿಯಾದ ನನ್ನ ಜೊತೆ ರೂಪಾ ಅವರು ವಾಗ್ವಾದ ನಡೆಸಿ ಹೋಗಿದ್ದರು. ತುಮಕೂರು ಜೈಲಲ್ಲಿ ರೂಪಾಂತರ ಕಾರ್ಯಕ್ರಮದ ವೇಳೆ ಕೆಲವೇ ಕೆಲವು ವರದಿಗಾರರನ್ನ ಕರೆಸಲು ನಾನು ಸೂಚಿಸಿದ್ದೆ. ಆದ್ರೆ ಸುಪ್ರೀಂಕೋರ್ಟ್ ಆದೇಶ ಮೀರಿ ಹೆಚ್ಚು ಪತ್ರಕರ್ತರನ್ನ ಕರೆಸಿ ಪ್ರಚಾರ ಪಡೆದಿದ್ದಕ್ಕೆ ಬುದ್ಧಿ ಹೇಳಿದ್ದೆ. ನೊಟೀಸ್ ನೀಡಿ ರೂಪಾಗೆ ಉತ್ತರಿಸಲು ಕೇಳಿದಾಗ ನನ್ನ ಮೇಲೆ ಜೋರು ಮಾಡಿದ್ರು. ಆಮೇಲೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ತಮ್ಮಿಷ್ಟ ಬಂದಂತೆ ಜೈಲಿನ ಬಗ್ಗೆ ತಮ್ಮ ಬಗ್ಗೆ ಮಾತನಾಡಿದ್ರು. ಆ ಫೋಟೋಗಳನ್ನ ಫೇಸ್‍ಬುಕ್‍ನಲ್ಲಿ ಹಾಕಿಕೊಂಡು ನಿಯಮ ಮೀರಿದ್ದಕ್ಕೆ ಮೆಮೋ ನೀಡಿದ್ದೆ. ಜುಲೈ 10 ರಂದು ಮುಖ್ಯಮಂತ್ರಿಗಳು ಸಭೆ ಕರೆದ ದಿನವೇ ಪರಪ್ಪನ ಅಗ್ರಹಾರ ಭೇಟಿಗೆ ತೆರಳಿದ್ರು. ಹಿರಿಯ ಅಧಿಕಾರಿಯಾಗಿ ನಾನು ಸಭೆಗೆ ಯಾಕೆ ಬಂದಿಲ್ಲ ಎಂದು ಉತ್ತರ ಕೇಳಿ 3ನೇ ಬಾರಿ ನೋಟಿಸ್ ನೀಡಿದ್ದೆ. ಆದ್ರೂ ನಿಯಮ ಮೀರಿ ಜೈಲಿನೊಳಗೆ ಹೋಗಿದ್ದಾರೆ. ಜೈಲಧಿಕಾರಿಗಳಿಗೂ ತಿಳಿಸದೇ ವರದಿ ಸಿದ್ಧಪಡಿಸಿದ್ದಾರೆ. ಶಶಿಕಲಾ ಅವರಿಗೆ ಸೌಕರ್ಯ ನೀಡಿದ್ದೀವಿ, ತೆಲಗಿಗೆ ಸೇವಕರನ್ನ ನೀಡಲಾಗಿದೆ ಎಂದು ಸುಳ್ಳು ವರದಿ ಮಾಧ್ಯಮಗಳಿಗೆ ನೀಡಿದ್ದಾರೆ. ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸವಲತ್ತು ನೀಡಿಲ್ಲ. ಆದ್ರೆ ಕೋರ್ಟ್ ಆದೇಶದಂತೆ ತೆಲಗಿಗೆ ಕೆಲವು ಸವಲತ್ತು ನೀಡಿದ್ದೇವೆ ಅಷ್ಟೇ ಅಂತ ವರದಿಯಲ್ಲಿ ಹೇಳಿದ್ದಾರೆ.

ತೆಲಗಿ ಮೇಲೆ ತೆರಿಗೆ: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣ ರೂವಾರಿ ಕರೀಂ ಲಾಲ್ ತೆಲಗಿಗೆ ಕೇಂದ್ರ ಕಾರಾಗೃಹದಲ್ಲಿ ರಾಜಮರ್ಯಾದೆ ಸುದ್ದಿ ಬಿತ್ತರಗೊಳ್ಳುತಿದ್ದಂತೆ ಈತನ ಕರಾಳ ಕೃತ್ಯದ ಬಗ್ಗೆ ಇನ್ನೊಂದು ಸ್ಫೋಟಕ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕರೀಂ ಲಾಲ್ ತೆಲಗಿ ಸರ್ಕಾರಕ್ಕೆ ಕಟ್ಟಬೇಕಾಗಿರೋದು ಬರೊಬ್ಬರಿ 254 ಕೋಟಿ ರೂಪಾಯಿ. ತೆಲಗಿ ಸರ್ಕಾರಕ್ಕೆ ಕಟ್ಟಬೇಕಾದ ಹಣದ ದಾಖಲಾತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *