ವೋಟ್‌ ಬ್ಯಾಂಕ್‌ ಛಿದ್ರವಾಗುತ್ತೆ ಅಂತ ಮುಂಬೈ ದಾಳಿಕೋರರ ಮೇಲೆ ಕಾಂಗ್ರೆಸ್‌ ಕ್ರಮ ತೆಗೆದುಕೊಳ್ಳಲಿಲ್ಲ: ಮೋದಿ

Public TV
2 Min Read

– ಮುಂಬೈ ಭಯೋತ್ಪಾದಕ ದಾಳಿ ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಭುವನೇಶ್ವರ: 26/11ರ ಮುಂಬೈ ಭಯೋತ್ಪಾದಕ ದಾಳಿ (Mumbai Attacks) ನಂತರ ಆಡಳಿತದಲ್ಲಿದ್ದ ಕಾಂಗ್ರೆಸ್‌ ಪಕ್ಷ ತಮ್ಮ ವೋಟ್‌ ಬ್ಯಾಂಕ್‌ ಛಿದ್ರವಾಗುತ್ತೆ ಅಂತ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಒಡಿಶಾದ ಕಂಧಮಾಲ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, 2008ರ ನವೆಂಬರ್‌ 26ರಂದು ನಡೆದ ಮುಂಬೈ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ದುರ್ಬಲ ಮನಸ್ಥಿತಿಯಿಂದ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಜನರು ದಶಕಗಳಿಂದ ಹೋರಾಡುತ್ತಾ ಬಂದಿದ್ದಾರೆ. ದೇಶವು ಆಗಾಗ್ಗೆ ಭಯೋತ್ಪಾದಕ ದಾಳಿ ಎದುರಿಸಿದೆ. ಆದರೂ ಕಾಂಗ್ರೆಸ್‌ ಇದ್ಯಾವುದರ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ʻಪಾಕ್‌ ಸಹ ಅಣುಬಾಂಬ್‌ ಹೊಂದಿದೆ, ಅಪ್ಪಿ ತಪ್ಪಿ ಭಾರತದ ಮೇಲೆ ಉಡಾಯಿಸಿದ್ರೆ ಏನಾಗುತ್ತೆ ಯೋಚಿಸಿ?ʼ ಎನ್ನುವ ಕಾಂಗ್ರೆಸ್‌ ಮಾಜಿ ಸಚಿವ ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪದೇ ಪದೇ ತನ್ನದೇ ದೇಶವನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ಅವರು ಬಳಿ ಅಣು ಬಾಂಬ್ ಇದೆ ಎಚ್ಚರಿಕೆಯಿಂದಿರಿ ಎಂದು ಭಯಭೀತಗೊಳಿಸುತ್ತಿದೆ. ಆ ದೇಶ ನಮ್ಮ ದೇಶದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಪಾಕಿಸ್ತಾನದ ಬಾಂಬ್ ಬಗ್ಗೆ ಮಾತನಾಡುತ್ತಾರೆ. ಆದರೆ ಪಾಕಿಸ್ತಾನದ ಸ್ಥಿತಿಯು ಅವರಿಗೆ ತಿಳಿದಿಲ್ಲ. ಅವರು ತಮ್ಮ ಬಾಂಬ್‌ಗಳನ್ನು ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದಾರೆ. ಆದರೆ ಜನರಿಗೆ ಅವರ ಗುಣಮಟ್ಟದ ಬಗ್ಗೆ ತಿಳಿದಿರುವುದರಿಂದ ಯಾರೂ ಖರೀದಿಸಲು ಬಯಸುತ್ತಿಲ್ಲ ಎಂದ ಅವರು ಪಾಕ್ ಆರ್ಥಿಕತೆಯನ್ನು ವ್ಯಂಗ್ಯವಾಡಿದ್ದಾರೆ.

ನೆನಪಿದೆಯಾ ಮುಂಬೈ ದಾಳಿಯ ಕರಾಳ ದಿನ..?
2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.

Share This Article