ಸೆನಗಲ್‍ನಿಂದ ಭೂಗತ ಪಾತಕಿ ರವಿ ಪೂಜಾರಿ ಎಸ್ಕೇಪ್?

Public TV
1 Min Read

ಬೆಂಗಳೂರು: ನಕಲಿ ಪಾಸ್‍ಪೋರ್ಟ್ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನಗಲ್‍ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ದೊರೆ ರವಿ ಪೂಜಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಹೇಗೆ ಪರಾರಿಯಾಗಿದ್ದಾನೆ ಎನ್ನುವುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ನ್ಯಾಯಾಲಯದಿಂದ ಬೇಲ್ ಪಡೆದು ರವಿ ಪೂಜಾರಿ ಬಿಡುಗಡೆಹೊಂದಿದ್ದಾನೆ. ಈ ಸಂದರ್ಭವನ್ನೇ ಬಳಸಿಕೊಂಡು ಆತ ಸೆನೆಗಲ್ ನಿಂದ ಪರಾರಿಯಾಗಿದ್ದಾನೋ ಅಥವಾ ಜೈಲಿನಿಂದಲೇ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ರವಿ ಪೂಜಾರಿ ಪರಾರಿಯಾಗಿದ್ದಾನೆ ಎಂದು ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ.

ಈ ಕುರಿತು ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರವಿ ಪೂಜಾರಿ ಸೆನೆಗಲ್‍ನಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತವಾಗಿ ಯಾರೂ ತಿಳಿಸಿಲ್ಲ.

ಈ ಸುದ್ದಿ ನಿಜವೇ ಆದರೆ ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ರವಿ ಪೂಜಾರಿಯನ್ನು ಕಾನೂನು ಹೋರಾಟದಡಿ ಗಡೀಪಾರು ಮಾಡುವ ಭಾರತದ ಪೊಲೀಸರ ಪ್ರಯತ್ನಕ್ಕೆ ತಣ್ಣೀರು ಬಿದ್ದಿದೆ. ರವಿ ಪೂಜಾರಿಯನ್ನು ಕರೆತರಲು ಬೆಂಗಳೂರು, ಮುಂಬೈ ಪೊಲೀಸರು ಕಳೆದ 3 ತಿಂಗಳಿಂದ ಸೆನಗಲ್‍ನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು.

ಆತನ ವಿರುದ್ಧ ದಾಖಲಾಗಿರೋ ಕೇಸ್‍ಗಳು, ಸಾಕ್ಷ್ಯಾಧಾರಗಳನ್ನು ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಅಂತಿಮ ಹಂತದಲ್ಲಿದ್ದು, ಹಸ್ತಾಂತರ ಆಗುವ ನಿರೀಕ್ಷೆ ಇತ್ತು. ಈ ಮಧ್ಯೆ, ರವಿ ಪೂಜಾರಿ ಅರೆಸ್ಟ್ ಕ್ರೆಡಿಟ್‍ಗಾಗಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವೆ ಫೆಬ್ರವರಿ ತಿಂಗಳಲ್ಲಿ ಭಾರೀ ಟ್ವೀಟ್ ಸಮರವೇ ನಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *