ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್‌ ರಿಸೈನ್‌ ಮಾಡಿದ್ದು ಯಾಕೆ?

Public TV
3 Min Read

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Dhankhar) ಸೋಮವಾರ ರಾತ್ರಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇನ್ನೂ ಎರಡೂವರೆ ವರ್ಷ ಸೇವಾವಧಿ ಇದ್ದರೂ ದಿಢೀರ್ ರಾಜೀನಾಮೆ(Resignation) ನೀಡಿರುವುದು ಇಡೀ ದೇಶವೇ ದಿಗ್ಭ್ರಮೆ ಒಳಗಾಗಿದೆ ಮಾತ್ರವಲ್ಲ ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜೀನಾಮೆಯನ್ನು ಅಂಗೀಕರಿಸಿದ್ದು, ಗೃಹ ಸಚಿವಾಲಯಕ್ಕೆ ರವಾನಿಸಿದ್ದಾರೆ. ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಧನಕರ್ ಕೊಡುಗೆಯನ್ನು ಕೊಂಡಾಡಿದ್ದಾರೆ. ಧನಕರ್ ಆರೋಗ್ಯ ಚೇತರಿಕೆ ಆಗಲಿ ಅಂತಲೂ ಮೋದಿ ಹಾರೈಸಿದ್ದಾರೆ.

ಅನಾರೋಗ್ಯದಿಂದಲೇ ರಾಜೀನಾಮೆ ನೀಡಿರುವುದಾಗಿ ಧನಕರ್ ಹೇಳಿದ್ದರೂ ಕಾಂಗ್ರೆಸ್ (Congress) ಹಲವು ಪ್ರಶ್ನೆಗಳನ್ನು ಎತ್ತಿದೆ. ಇನ್ನೂ ಎರಡೂವರೆ ವರ್ಷ ಅಧಿಕಾರ ಇದ್ದರೂ, ರಾಜೀನಾಮೆ ಕೊಟ್ಟಿರೋದ್ಯಾಕೆ ಅಂತ ಪ್ರಶ್ನೆ ಮಾಡಿದೆ. ಎಲ್ಲೋ ಏನೋ ಆಗಿದೆ ಅಂತ ರಾಜ್ಯಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಆರೋಪವನ್ನು ನಡ್ಡಾ ನಿರಾಕರಿಸಿದ್ದು, ಪ್ರಮುಖ ಸಂಸದೀಯ ಸಭೆಯಲ್ಲಿ ಭಾಗಿಯಾಗಿದ್ದರಿಂದ ನಿರ್ಣಾಯಕ ವ್ಯವಹಾರ ಸಲಹಾ ಸಮಿತಿ (BAC) ಸಭೆಯಲ್ಲಿ ಭಾಗಿಯಾಗಲು ಆಗಲಿಲ್ಲ. ಉಪ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಧನಕರ್ ರಾಜೀನಾಮೆ ಬಗ್ಗೆ ಚರ್ಚೆಗೆ ವಿಪಕ್ಷಗಳು ಒತ್ತಾಯಿಸಿದ್ದರಿಂದ ರಾಜ್ಯಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ಧನಕರ್ ರಾಜೀನಾಮೆ ಯಾಕೆ?
ಅನುಮಾನ 1: ನಡ್ಡಾ ವಿರುದ್ಧ ಬೇಸರ
ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಯಶವಂತ ವರ್ಮಾ ವಾಗ್ದಂಡನೆ ವಿಚಾರದಲ್ಲಿ ವಿಪಕ್ಷಗಳ ನೋಟಿಸ್ ಅಂಗೀಕಾರವಾಗಿತ್ತು. ಸೋಮವಾರ ಈ ವಿಚಾರದ ಬಗ್ಗೆ ಸದನದಲ್ಲಿ ಭಾರೀ ಚರ್ಚೆ ನಡೆದಿತ್ತು. ಚರ್ಚೆಯ ವೇಳೆ ಜೆಪಿ ನಡ್ಡಾ (JP Nadda) ನನ್ನ ಹೇಳಿಕೆಯಷ್ಟೇ ದಾಖಲು ಆಗಲಿದೆ. ಬೇರೆಯವರದ್ದು ದಾಖಲಾಗುವುದಿಲ್ಲ ಎಂದಿದ್ದರು. ಈ ಹೇಳಿಕೆಗೆ ಬೇಸರಗೊಂಡಿರುವ ಸಾಧ್ಯತೆಯಿದೆ.

ಅನುಮಾನ 2: ನ್ಯಾಯಾಂಗದ ಬಗ್ಗೆ ಹೇಳಿಕೆ
ನ್ಯಾಯಾಂಗ ಬಗ್ಗೆ ಪದೇ ಪದೇ ಧನಕರ್ ಹೇಳಿಕೆ ನೀಡಿದ್ದರು. ನ್ಯಾಯಾಂಗಕ್ಕಿಂತ ಸಂಸತ್ತೇ ದೊಡ್ಡದು ಎಂದು ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಧನಕರ್ ಹೇಳಿಕೆಯೂ ರಾಜೀನಾಮೆಗೆ ಕಾರಣ ಆಗಿರಬಹುದು.  ಇದನ್ನೂ ಓದಿ: ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳು ವಿಶ್ವಾಸಾರ್ಹ ದಾಖಲೆಗಳಲ್ಲ: ಸುಪ್ರೀಂಗೆ ಚುನಾವಣಾ ಆಯೋಗ ಅಫಿಡವಿಟ್‌

 

ಅನುಮಾನ 3: ಬಿಎಸಿ ಸಭೆಗೆ ಗೈರಾಗಿದ್ದಕ್ಕೆ ಅಸಮಾಧಾನ
ಧನಕರ್ ಸೋಮವಾರ ಮಧ್ಯಾಹ್ನ 12:30ಕ್ಕೆ ನಿರ್ಣಾಯಕ ವ್ಯವಹಾರ ಸಲಹಾ ಸಮಿತಿ (BAC) ಸಭೆ ಕರೆದಿದ್ದರು. ಸಂಜೆ ಮತ್ತೆ ಸಭೆಗೆ ನಿರ್ಧರಿಸಲಾಗಿತ್ತು. ಸಂಜೆಯ ಸಭೆಗೆ ಕೇಂದ್ರ ಸಚಿವ ನಡ್ಡಾ, ರಿಜಿಜು ಗೈರಾಗಿದ್ದರು. ಈ ಸಭೆಗೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ಪ್ರತಿನಿಧಿಸಿದ್ದರು. ಮೂಲಗಳ ಪ್ರಕಾರ ತನಗೆ ತಿಳಿಸದೇ ಜೆಪಿ ನಡ್ಡಾ ಮತ್ತು ರಿಜಿಜು ಅವರು ಗೈರಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಎಸಿ ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಇದನ್ನೂ ಓದಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ ಆದೇಶ ಎತ್ತಿ ಹಿಡಿದ ಸುಪ್ರೀಂ

ಬಿಎಸಿ ಚರ್ಚೆಗಳು ನಡೆಯುತ್ತಿರುವಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕೊಠಡಿಯಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯುತ್ತಿತ್ತು. ನಡ್ಡಾ, ಶಾ, ರಿಜಿಜು, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಿದ್ದ ಸಭೆಯಲ್ಲಿ ವಾಗ್ದಂಡನೆ ನೋಟಿಸ್‌ಗೆ ದಾಖಲೆಗೆ ಸಹಿ ಹಾಕಲು ಎನ್‌ಡಿಎ ಸಂಸದರನ್ನು ಪ್ರತ್ಯೇಕವಾಗಿ ಕರೆಯಲಾಗಿತ್ತು. ಸಭೆಯು ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದಿತ್ತು ಮತ್ತು ಬಿಜೆಪಿ ಮಿತ್ರಪಕ್ಷಗಳು ಸಹ ಸಹಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಈ ಸಭೆಯ ಬಳಿಕ ಗೃಹ ಸಚಿವ ಅಮಿತ್ ಶಾ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದರು. ಇದಾದ ಸುಮಾರು ಎರಡು ಗಂಟೆಗಳ ನಂತರ ಧನಕರ್‌ ರಾಜೀನಾಮೆ ಘೋಷಣೆ ಮಾಡಿದ್ದರು.

Share This Article