ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್

Public TV
2 Min Read

– ಸರ್ಕಾರಕ್ಕೆ ಪ್ರತಿಪಕ್ಷಗಳಿಂದ ಸವಾಲು

ನವದೆಹಲಿ: ಇನ್ನುಮುಂದೆ ಲೋಕಸಭೆ, ರಾಜ್ಯಸಭೆ ಅಧಿವೇಶನಗಳಲ್ಲಿ ಜುಮ್ಲಾಜೀವಿ, ಬಾಲ ಬುದ್ಧಿ, ಕೋವಿಡ್ ಸ್ಪ್ರೆಡರ್‌, ನಾಚಿಕೆಗೇಡು, ದ್ರೋಹ, ಭ್ರಷ್ಟ, ಅಸಮರ್ಥ, ಸರ್ವಾಧಿಕಾರಿ ಅಂತಹ ಅಸಂಸದೀಯ ಪದಗಳನ್ನು ಬಳಸುವಂತಿಲ್ಲ ಎಂದು ಲೋಕಸಭೆಯ ಸೆಕ್ರಟೇರಿಯಟ್ ಬಿಡುಗಡೆಗೊಳಿಸಿದ ಕಿರು ಪುಸ್ತಕದಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

ಇದೇ ಜುಲೈ 18ರಿಂದ ಪ್ರಾರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುಂಚಿತವಾಗಿ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗಿದೆ. ಇದನ್ನೂ ಓದಿ: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್

ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 380ರ ಪ್ರಕಾರ, ಕಲಾಪದ ಸಂದರ್ಭದಲ್ಲಿ ಅಸಂಸದೀಯ ಪದಗಳನ್ನು ಬಳಸಿದರೆ ಸ್ಪೀಕರ್, ಅವರನ್ನು ಕಲಾಪದಿಂದ ಹೊರ ಹಾಕುತ್ತಾರೆ. ಈ ಬಗ್ಗೆ ಬಿಡುಗಡೆಯಾಗಿರುವ ಟಿಪ್ಪಣಿಯಲ್ಲಿ ಸೇರಿಸಲಾಗಿದೆ. ರಾಜ್ಯಸಭಾ ಅಧ್ಯಕ್ಷರು ಅಥವಾ ಲೋಕಸಭಾ ಸ್ಪೀಕರ್ ಅಧಿವೇಶನದ ವೇಳೆ ಸದನದಲ್ಲಿ ಮಾತನಾಡುವ ಮಾತುಗಳನ್ನು ಗಮನಿಸುತ್ತಾರೆ. ಕೆಲವೊಮ್ಮೆ ಸಭಾಪತಿಯವರು ಅಸಂಸದೀಯ ಪದಗಳನ್ನು ಕಡತದಿಂದ ತೆಗೆದು ಹಾಕುತ್ತಾರೆ. ಆದರೆ ಸಭಾಪತಿಗೆ ಯಾವುದೇ ಪದಗಳ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಸರ್ವಾಧಿಕಾರಿ, ಶಕುನಿ, ತಾನಾಶಾಹಿ, ಜೈಚಂದ್, ವಿನಾಶ್ ಪುರುಷ್, ಖಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ಢಿಂಢೋರ ಪೀಟ್ನಾ, ಬೆಹ್ರಿ ಸರ್ಕಾರ್ ಮುಂತಾದ ಪದಗಳನ್ನೂ ಅಸಂಸದೀಯ ಎಂದು ಗುರುತಿಸಲಾಗಿದ್ದು, ಇಂತಹ ಪದಗಳನ್ನು ಬಳಸಿದರೂ ಕಡತದಿಂದ ತೆಗೆದುಹಾಕಲಾಗುತ್ತದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಷಣಕ್ಷಣಕ್ಕೂ ವಿಷಮ ಸ್ಥಿತಿ – ಓರ್ವ ನಾಗರಿಕ ಸಾವು, 35 ಮಂದಿಗೆ ಗಾಯ

ಪುಸ್ತಕದಲ್ಲಿ ಅಸಂಸದೀಯ ಎಂದು ಗುರುತಿಸಲಾದ ಪದಗಳಲ್ಲಿ ರಕ್ತಪಾತ, ರಕ್ತಸಿಕ್ತ, ದ್ರೋಹ, ವಂಚನೆ, ಚಮ್ಚಾ, ಚಮ್ಚಾಗಿರಿ, ಚೇಲಾಸ್, ಬಾಲಿಶ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು ಸೇರಿದೆ. ಇವುಗಳ ಹೊರತಾಗಿ ಅವಮಾನ, ಕತ್ತೆ, ನಾಟಕ, ಕಣ್ಣೊರೆಸುವ ತಂತ್ರ, ಗೂಂಡಾಗಿರಿ, ಅಸಮರ್ಥ, ಸುಳ್ಳು, ಗದ್ದಾರ್, ಗಿರ್ಗಿಟ್, ಗಢಿಯಾಲಿ ಆಂಸು, ಅಪಮಾನ್, ಅಸತ್ಯ, ಅಹಂಕಾರ್, ಕಾಲಾ ದಿನ್, ಕಾಲಾ ಬಜಾರ್, ದಂಗ, ದಲಾಲ್, ದಾದಾಗಿರಿ, ಬೆಚಾರ, ಬಾಯ್‌ಕಟ್. ಲಾಲಿಪಾಪ್, ಸಂವೇದನಾಹೀನ್, ಲೈಂಗಿಕ ಕಿರುಕುಳ ಪದಗಳನ್ನೂ ಅಸಂಸದೀಯ ಎಂದು ಪರಿಗಣಿಸಲಾಗುವುದು ಎಂದು ಲೋಕಸಭಾ ಸೆಕ್ರಟೇರಿಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ಕ್ರಮಕ್ಕೆ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಹಾಗೂ ಸಂಸದ ಡೆರಕ್ ನಾವು ಈ ಪದಗಳನ್ನು ಬಳಸುತ್ತೇವೆ, ಬೇಕಿದ್ದರೆ ಅಮಾನತು ಮಾಡಿ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತಂತೆ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದು, ನಿಮ್ಮ ಟೀಕೆಗಳು ಸೃಜನಶೀಲವಾಗಿರಬೇಕು. ಇಲ್ಲದಿದ್ದರೆ ಸಂಸತ್ತಿನ ಅಧಿವೇಶನ ಪ್ರಯೋಜನವಾಗದು. ಜುಮ್ಲಾಜೀವಿ ಅನ್ನು ಜುಮ್ಲಾಜೀವಿ ಅನ್ನದೇ ಮತ್ತೆ ಇನ್ನೇನು ಹೇಳಬೇಕು? ಇಂತಹ ಪದಗಳನ್ನು ನಿಷೇಧಿಸುವುದು ಅನಿವಾರ್ಯವೇ ಎಂದು ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಸಹ ಟ್ವೀಟ್ ಮಾಡಿದ್ದು, ಬಿಜೆಪಿ ಭಾರತವನ್ನು ಹೇಗೆ ನಾಶಪಡಿಸುತ್ತದೆ ಎಂಬುದು ಗೊತ್ತಾಗುತ್ತಿದೆ. ಅದಕ್ಕಾಗಿ ಪ್ರತಿ ಪಕ್ಷಗಳು ಬಳಸುವ ಪದಗಳನ್ನು ಆಯ್ಕೆ ಮಾಡಿ ನಿಷೇಧಿಸಿದೆ. ಇದು ನಾಚಿಗೇಡಿನ ಸಂಗತಿ. ದುರ್ಬಳಕೆ, ದ್ರೋಹ, ಭ್ರಷ್ಟ, ಬೂಟಾಟಿಕೆ, ಅಸಮರ್ಥ ಎಂಬ ಪದಗಳನ್ನು ನಾನು ಬಳಸುತ್ತೇನೆ, ನನ್ನನ್ನೂ ಬೇಕಿದ್ದರೆ ಅಮಾನತು ಮಾಡಿ. ಆದರೆ ನಾನು ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *