ಧಾರವಾಡ: ಕರ್ತವ್ಯ ಲೋಪದ ಹಿನ್ನೆಲೆ ಧಾರವಾಡ (Dharwad) ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ರೇಖಾ ಡೊಳ್ಳಿನ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯದರ್ಶಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರೇಖಾ ಅವರು ಕಾನೂನು ಬಾಹಿರವಾಗಿ ಕೋಟಿ ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಜಿಲ್ಲಾ ಮಟ್ಟದ ಅನುದಾನ ಪ್ರಸ್ತಾವನೆ ಸಲ್ಲಿಸುವಾಗ ಅವರು ಕಾನೂನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ಜನರಿಗೆ ಕೌಶಲ್ಯ ಕೊಡುವ ಯೋಜನೆ ಇತ್ತು. 2017-18ರಲ್ಲಿ ಈ ಯೋಜನೆಯ ಕಾರ್ಯಕ್ರಮಕ್ಕೆ ಕೈಗೊಂಡ ಅಭಿಯಾನದ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯ್ತಿ ಸಿಇಒ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿ ಆನಂತರ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಇದನ್ನೂ ಓದಿ: ಹೈಕೋರ್ಟ್ ಆದೇಶದಂತೆ ಬೈಕ್ ಟ್ಯಾಕ್ಸಿ ಸೇವೆ ಬಗ್ಗೆ ತೀರ್ಮಾನ – ರಾಮಲಿಂಗಾ ರೆಡ್ಡಿ
ಆದರೆ ರೇಖಾ ಅವರು ಈ ನಿಯಮಗಳನ್ನು ಗಾಳಿಗೆ ತೂರಿದ್ದರು. ಜಿಲ್ಲಾ ಪಂಚಾಯ್ತಿ ಸಿಇಒಗೆ ಸಮಿತಿ ರಚನೆ ಬಗ್ಗೆ ಗಮನಕ್ಕೆ ತರದೇ ಸ್ಕ್ಯಾನ್ ಐಟಿ ಸೆಲ್ಯುಷನ್ ಎಂಬ ಕಂಪನಿಗೆ ಈ ಅನುದಾನ ಬರುವಂತೆ ಮಾಡಿದ್ದರು. 3 ಕೋಟಿ 65 ಲಕ್ಷ 70 ಸಾವಿರ ರೂ. ಅನುದಾನ ಸ್ಕ್ಯಾನ್ ಐಟಿ ಸೆಲ್ಯುಷನ್ ಕಂಪನಿಗೆ ಬರುವಂತೆ ರೇಖಾ ಮಾಡಿದ್ದರು. ಈ ವಿಷಯವನ್ನು ಧಾರವಾಡ ಜಿಪಂ ಸಿಇಓ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದರು. ಇದನ್ನೂ ಓದಿ: ಧರ್ಮಸ್ಥಳ ವಿಚಾರದಲ್ಲಿ ವರಸೆ ಬದಲಿಸಿದ ಸಿಎಂ – ಜೋಶಿ ಆರೋಪ
ಇದನ್ನೆಲ್ಲ ಪರಿಶೀಲಿಸಿದ ಕಾರ್ಯದರ್ಶಿಗಳು ಕರ್ತವ್ಯ ಲೋಪದ ಹಿನ್ನೆಲೆ ರೇಖಾ ಡೊಳ್ಳಿನ ಅವರನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಡೆಸಲಿದೆ.