ಎಂಬಿಪಿ, ವಿನಯ್ ಕುಲಕರ್ಣಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಯುವತಿ ಅರೆಸ್ಟ್

Public TV
2 Min Read

ಧಾರವಾಡ: ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಯುವತಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ಜಿಲ್ಲೆಯ ಗರಗ ಗ್ರಾಮದ ನಿವಾಸಿ ಶೃತಿ ಬೆಳ್ಳಕ್ಕಿ (24) ಬಂಧಿತ ಯುವತಿ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಶೃತಿ, ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಅವರ ವಿರುದ್ಧ ಮಾತನಾಡಿದ್ದ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸ್ಥಳೀಯ ಕಾಂಗ್ರೆಸ್ ಮುಖಂಡ ದಶರಥ ದೇಸಾಯಿ ಅವರು ಶೃತಿ ಬೆಳ್ಳಕ್ಕಿ ವಿರುದ್ಧ ಚುನಾವಾಣಾ ಆಯೋಗಕ್ಕೆ ದೂರು ನೀಡಿದ್ದರು. ಮತದಾನಕ್ಕೂ ಮುನ್ನವೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೂಡ ದಾಖಲಾಗಿದೆ. ರಾಜಕೀಯ ನಾಯಕರ ವಿರುದ್ಧ ಶೃತಿ ಬೆಳ್ಳಕ್ಕಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಸಮುದಾಯ, ವರ್ಗ ಹಾಗೂ ಧರ್ಮಗಳ ಮಧ್ಯೆ ವೈರತ್ವ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿತ್ತು?
ನಾನು ಭಾರತೀಯಳು ಹಾಗೂ ಹಿಂದೂ ವೀರಶೈವ ಲಿಂಗಾಯತ ಧರ್ಮದ ಯುವತಿ. ಸಚಿವ ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಅವರು ನಮ್ಮ ಜಾತಿಯವರು. ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರವು ಬಹಿರಂಗವಾಗಿದೆ ಎಂದು ಶೃತಿ ಬೆಳ್ಳಕ್ಕಿ ಹೇಳಿದ್ದಳು.

ಒಡೆದು ಆಳುವ ನೀತಿಯ ಮೂಲಕ ಹಿಂದೂ ಧರ್ಮವನ್ನು ನಿರ್ನಾಮ ಮಾಡಿ, ಭಾರತವನ್ನು ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ರಾಷ್ಟ್ರವಾಗಿ ಮಾರ್ಪಡಿಸುವ ಉದ್ದೇಶವು ಪತ್ರದಲ್ಲಿದೆ. ಹಿಂದೂ ಧರ್ಮದ ಉಪಜಾತಿಯಲ್ಲಿ ಬರುವ ಎಂ.ಬಿ.ಪಾಟೀಲ ಅವರು ಇಂತಹದ್ದಕ್ಕೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಹಿಂದೂ ಧರ್ಮ ನಿರ್ನಾಮವಾಗಲಿದೆ ಎಂದು ತಿಳಿಸಿದ್ದಳು.

ಎಂ.ಬಿ.ಪಾಟೀಲ್ ಅವರಂತಹ ಸ್ವಾರ್ಥ ರಾಜಕಾರಣಿಗಳಿಂದ ದೇಶ ನಾಶವಾಗುತ್ತಿದೆ. ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಕೆಲವು ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಸಂಘಟನೆಗಳು ಹಣ ಸಹಾಯ ಮಾಡಿದ್ದಾರೆ. ಆರ್ ಎಸ್‍ಎಸ್ ದೇಶದಲ್ಲಿ ಹಿಂದುತ್ವವನ್ನು ಬಲಗೊಳಿಸುತ್ತಿದೆ. ಅವರಿಗೆ ಬಿಜೆಪಿ ಬೆಂಬಲ ಸಿಕ್ಕಿದೆ. ಹೀಗಾಗಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಶೃತಿ ಬೆಳ್ಳಕ್ಕಿ ಆರೋಪಿಸಿದ್ದಳು.

Share This Article
Leave a Comment

Leave a Reply

Your email address will not be published. Required fields are marked *