ಇದು ಲಜ್ಜೆಗೆಟ್ಟ ಸರ್ಕಾರ, ಪರಿಹಾರ ಹಣವನ್ನು ಪಕ್ಷ ಜಾತಿ ನೋಡಿ ನೀಡಲಾಗುತ್ತಿದೆ: ವಿನಯ್ ಕುಲಕರ್ಣಿ

Public TV
1 Min Read

ಧಾರವಾಡ: ಇದು ಲಜ್ಜೆಗೆಟ್ಟ ಸರ್ಕಾರ, ಪರಿಹಾರ ಹಣವನ್ನು ಪಕ್ಷ ಜಾತಿ ನೋಡಿ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿನಯ್ ಕುಲಕರ್ಣಿ, ಸರ್ಕಾರದ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ಇರಬೇಕು. ಮನೆಯಲ್ಲಿ ಕುಳಿತು ಅಧಿಕಾರ ನಡೆಸಲು ಆಗುವುದಿಲ್ಲ. ಕಷ್ಟದಲ್ಲಿ ಇರುವವರ ಸ್ಥಳಕ್ಕೆ ಭೇಟಿ ನೀಡಿದರೆ ಜನರ ಕಷ್ಟ ಅರ್ಥವಾಗುತ್ತೆ. ಇವರಿಗೆ ಯಾವ ಕಲ್ಪನೆ ಇಲ್ಲ ಎಂದು ಸರ್ಕಾರದ ಮೇಲೆ ಕಿಡಿಕಾರಿದರು.

ಪ್ರವಾಹದಲ್ಲಿ ಮನೆ ಕಳೆದುಕೊಂಡವರು ಪರಿಸ್ಥಿತಿ ಕೆಟ್ಟಿದೆ. ಇದು ಲಜ್ಜೆಗೆಟ್ಟ ಸರ್ಕಾರ ಇವರಿಗೆ ನಾಚಿಕೆಯಾಗಬೇಕು. ಬಡವರು ಬಗ್ಗೆ ಕಳಕಳಿ ಇಲ್ಲ. ರೈತರಿಗೆ ಪರಿಹಾರ ಸಿಕ್ಕಿಲ್ಲ. ಮಳೆಯಿಂದ ಹಾನಿಯಾದ ಪರಿಹಾರ ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಬೇಕಿದ್ದರೆ ಹಳ್ಳಿಗಳಿಗೆ ನೀವೇ ಹೋಗಿ ಮಾತನಾಡಿ ನೋಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ನಾವು ಯಾವ ಪಕ್ಷ ಜಾತಿ ನೋಡಿಲ್ಲ. ಆದರೆ ಇವರು ಮನುಷ್ಯತ್ವ ಇಲ್ಲದವರು ಜಾತಿ ಪಕ್ಷ ನೋಡಿ ಪರಿಹಾರ ಕೊಡುತ್ತಿದ್ದಾರೆ. ನಾನು ಕೂಡಾ ನಿಮಗೆ ಹೊರಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಮಾಧ್ಯಮ ಮಿತ್ರರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಜನರ ಪರಿಸ್ಥಿತಿ ತೋರಿಸಿ. ಅದನ್ನು ನೋಡಿಯಾದರೂ ಪ್ರಚಾರ ಪ್ರಿಯರು ಹೊರ ಬಂದು ನೋಡ್ತಾರೆ ಎಂದು ಸರ್ಕಾರದ ಮೇಲೆ ಹರಿಹಾಯ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಈಗಲಾದರೂ ಅವಘಡ ಆದ ಸ್ಥಳಕ್ಕೆ ಭೇಟಿ ನೀಡಲಿ. ನೀವು ಸಿಎಂ ಆಗಿದ್ದವರು, ಅಧಿಕಾರಿಗಳಿಗೆ ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ ವಿನಯ ಕುಲಕರ್ಣಿ, ಅಧಿಕಾರ ಇದ್ದಂತ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶಟ್ಟರ್‍ಗೆ ಕಿವಿಮಾತು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *