– ಅಮಾಯಕನಂತೆ ಹುಡುಕಾಡಿದ್ದ ಹಂತಕ!
ಧಾರವಾಡ: ನಗರದ (Dharwad) ನಿರ್ಜನ ಪ್ರದೇಶವೊಂದರಲ್ಲಿ ನಡೆದಿದ್ದ ಮುಸ್ಲಿಂ ಯುವತಿಯ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು (Police) ಕೇವಲ 12 ಗಂಟೆಯಲ್ಲೇ ಬೇಧಿಸಿದ್ದಾರೆ. ಯುವತಿಯನ್ನು ಮದುವೆಯಾಗಬೇಕಿದ್ದ (Marriage) ಯುವಕನೆ ಈ ಪ್ರಕರಣದಲ್ಲಿ ವಿಲನ್ ಎಂಬುದು ಗೊತ್ತಾಗಿದೆ.
ನಗರದ ಝಾಕಿಯಾ ಮುಲ್ಲಾ (20) ಕೊಲೆಯಾದ ಯುವತಿ. ಈಕೆಯ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವಕ ಸಾಬೀರ್ ಕೊಲೆ ಆರೋಪಿಯಾಗಿದ್ದಾನೆ. ಆರೋಪಿ ಕೊಲೆಗೈದು ತನಗೇನು ಗೊತ್ತಿಲ್ಲದಂತೆ, ಆಕೆ ನಾಪತ್ತೆಯಾಗಿದ್ದಾಳೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಅಮಾಯಕನಂತೆ ಹುಡುಕಾಟ ನಡೆಸಿದ್ದ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ರೀಲ್ಸ್‌ಗೆ ವ್ಯಕ್ತಿ ಬಲಿ ಪಡೆದ ಶಿಂಜಿತಾ ಮುಸ್ತಫಾ ಕೊನೆಗೂ ಅರೆಸ್ಟ್
ಮಂಗಳವಾರ (ಜ.20) ಸಂಜೆ ಮನೆಯಿಂದ ಹೊರ ಹೋಗಿದ್ದ ಝಾಕಿಯಾ ಮುಲ್ಲಾ, ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಮನೆವರು ಆಕೆಯನ್ನು ರಾತ್ರಿವರೆಗೂ ಹುಡುಕಾಡಿದ್ದರು. ಮರುದಿನ ಧಾರವಾಡ ಹೊರವಲಯದ ಮನಸೂರಿಗೆ ಸಂಪರ್ಕ ಕಲ್ಪಿಸುವ ನಿರ್ಜನ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ವೇಲ್‍ದಿಂದ ಕತ್ತು ಬಿಗಿದು ಆಕೆಯನ್ನು ಕೊಲೆ ಮಾಡಲಾಗಿತ್ತು.
ಕೊಲೆಯಾದ ಸ್ಥಳದಲ್ಲೇ ಆಕೆಯ ಮೊಬೈಲ್ ಕೂಡ ಇತ್ತು. ಸುದ್ದಿ ಗೊತ್ತಾದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದರು. ಈ ವೇಳೆ ಕೊಲೆ ಮಾಡಿದ ಆರೋಪಿ ಕೂಡ ತನಗೇನೂ ಗೊತ್ತಿಲ್ಲವೆಂಬಂತೆ ಸ್ಥಳದಲ್ಲೇ ಇದ್ದ.
ಆರೋಪಿ ಸಾಬೀರ್, ಝಾಕಿಯಾ ತಂದೆಯ ಸ್ನೇಹಿತನ ಮಗ. ಇವರಿಬ್ಬರ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ, ಅಷ್ಟೊರಳಗೆ ಸಾಬೀರ್ ಝಾಕಿಯಾಳನ್ನು ಕೊಲೆ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಸಾಬೀರ್, ಝಾಕಿಯಾ ಶವ ಸಿಕ್ಕ ಸ್ವಲ್ಪ ದೂರದಲ್ಲೇ ಕೊಲೆ ಮಾಡಿ, ಶವವನ್ನು ತಂದು ಹಾಕಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಬಾರ್ ಮಾಲೀಕನ ಹತ್ಯೆ ಕೇಸ್ – ನಾಲ್ವರು ಅರೆಸ್ಟ್

