ಧಾರವಾಡ: ಧಾರವಾಡ (Dharwad) ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಲ್ಲಿ (KIADB) ಎರಡು ಬಾರಿ ಪರಿಹಾರ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪಿ ರವಿ ಕುರುಬೆಟ್‌ನನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010-12ರ ಅವಧಿಯಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ನೀಡಿದ್ದರು. ಆದರೆ 2021-22ರಲ್ಲಿ ಮತ್ತೆ ಹಲವು ಜಮೀನುಗಳಿಗೆ ಎರಡನೇ ಬಾರಿ 19.99 ಕೋಟಿ ರೂ. ಪರಿಹಾರ ನೀಡಿದ್ದರು. ಈ ಹಿನ್ನೆಲೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ವಿದೇಶದಲ್ಲಿ ಹೂಡಿಕೆ – ಕೈ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೂಡಾ ದೂರು ದಾಖಲಿಸಿಕೊಂಡಿತ್ತು. ಒಟ್ಟು 72 ಕೋಟಿ ರೂ. ಅಕ್ರಮ ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪದಡಿ ರವಿ ಕುರುಬೆಟ್‌ನನ್ನು ಇಡಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಕಲಹ – ಮಗನಿಂದಲೇ ತಂದೆ, ಸಹೋದರನ ಬರ್ಬರ ಹತ್ಯೆ
ಈ ಪ್ರಕರಣದಲ್ಲಿ ಹಿಂದೆ ಕೆಐಎಡಿಬಿ ನಿವೃತ್ತ ಅಧಿಕಾರಿ ವಸಂತಕುಮಾರ್ ಸಜ್ಜನ್ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಅಲ್ಲಾಬಕ್ಷ ದುಂಡಸಿರನ್ನು ಬಂಧಿಸಲಾಗಿತ್ತು.