ರಾತ್ರಿಯಿಡಿ ಟ್ರ್ಯಾಕ್ಟರ್ ಟೈರ್‌ನಲ್ಲಿ ನಿಂತು ರಕ್ಷಣೆಗಾಗಿ ಕೂಗುತ್ತಿದ್ದ ಧಾರವಾಡ ಕುಟುಂಬ

Public TV
1 Min Read

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿನ ತುಪ್ಪರಿ ಹಳ್ಳ ತುಂಬಿ ಬಂದಿದ್ದು, ಇದರ ಮಧ್ಯೆ ಏಳು ಜನ ಸಿಲುಕಿಕೊಂಡು ಪಾರಾಗಿ ಬಂದಿದ್ದಾರೆ.

ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಸೋರುತ್ತಿದೆ ಎಂದು ಹನಮನಹಾಳ ರಸ್ತೆಯಲ್ಲಿ ಇರುವ ತಮ್ಮ ಶೆಡ್ ಗೆ ಗಿರಮಲ್ಲ ಹಳಮನಿ ಹಾಗೂ ಅವರ ಕುಟುಂಬದವರು ಹೋಗಿದ್ದರು. ಆದರೆ, ತುಪ್ಪರಿ ಹಳ್ಳ ತುಂಬಿ ಬಂದಿದ್ದರಿಂದ ಇವರ ಶೆಡ್ ನೀರಿನ ಮಧ್ಯೆ ಸಿಲುಕಿಕೊಂಡಿತು.

ಇದರಿಂದಾಗಿ ರಾತ್ರಿಯಿಡಿ ಟ್ರ್ಯಾಕ್ಟರ್ ಟೈರ್‌ನಲ್ಲಿ ನಿಂತುಕೊಂಡು ರಕ್ಷಣೆಗಾಗಿ ಕೂಗುತ್ತಿದ್ದರು. ಇವರ ರಕ್ಷಣೆಗಾಗಿ ಎನ್‍ಡಿಆರ್‍ಎಫ್ ತಂಡ ಕೂಡ ಬರಲು ಸಜ್ಜಾಗಿತ್ತು. ಆದರೆ, ಬೆಳಗಿನ ಜಾವ ಕುಟುಂಬದ ಏಳೂ ಜನ ಒಬ್ಬೊಬ್ಬರಾಗಿ ಶೆಡ್ ನ ಹಿಂಬದಿಯಿಂದ ಹೊಲದಲ್ಲಿ ಪಾರಾಗಿ ಬಂದಿದ್ದಾರೆ. ಇವರಿಗೆ ಗ್ರಾಮಸ್ಥರು ಕೂಡ ಸಹಾಯ ಮಾಡಿದರು.

ಧಾರವಾಡದಲ್ಲಿ ಸುರಿಯುತ್ತಿರುವ ಜೋರು ಮಳೆಗೆ ಹಾರೊಬೆಳವಡಿ ಬಳಿ ಸೇತುವೆ ಕಡಿತಗೊಂಡಿದೆ. ಮಳೆಯ ರಭಸಕ್ಕೆ ಸೇತುವೆ ಎರಡು ಕಡೆ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಗೋಕಾಕ್ ಹಾಗೂ ಸವದತ್ತಿ ಕಡೆ ಹೋಗುವ ವಾಹನಗಳನ್ನು ಬಂದ್ ಮಾಡಲಾಗಿದೆ. ನೀರಿನ ರಭಸಕ್ಕೆ ಹಾರೋಬೆಳವಡಿ ಗ್ರಾಮ ಜಲಾವೃತಗೊಂಡಿದೆ.

ಜಿಲ್ಲೆಯ ಅಳ್ನಾವರ ತಾಲೂಕಿನ 700 ಎಕರೆ ವಿಸ್ತೀರ್ಣದ ಹುಲಿಕೆರೆಯ ಕೆಳಭಾಗದ ಮಣ್ಣು ಕುಸಿದಿದೆ. ಮಣ್ಣು ಮಿಶ್ರಿತ ಕೆಂಮಣ್ಣಿನ ಪ್ರವಾಹ ಉಂಟಾಗಿದ್ದು, ಹುಲಿಕೇರಿ, ಅಳ್ನಾವರ, ಕಡಬಗಟ್ಟಿ, ಲಿಂಗನಮಟ್ಟ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *