ಹೊಟ್ಟೆಯಲ್ಲಿದ್ದ ಮಗು ಅಂಗವೈಕಲ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ವೈದ್ಯೆ – 11.10 ಲಕ್ಷ ದಂಡ

Public TV
3 Min Read

ಧಾರವಾಡ: ವೈದ್ಯೋ ನಾರಾಯಣ ಹರಿ ಎನ್ನುವ ಮಾತಿದೆ. ವೈದ್ಯರು ಎಂದರೆ ದೇವರು ಎಂದು ನಂಬಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾತಿಗೆ ಅನೇಕ ವೈದ್ಯರು (Doctor) ಅಪಚಾರವೆಸಗುವಂತಹ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬರುತ್ತಿವೆ. ಇದೀಗ ಧಾರವಾಡದ (Dharwad) ವೈದ್ಯೆಯೊಬ್ಬರು ಇಂತಹುದೇ ಕೆಲಸ ಮಾಡಿದ್ದು, ಅವರಿಗೆ ನ್ಯಾಯಾಲಯ 11.10 ಲಕ್ಷ ರೂ. ದಂಡ ವಿಧಿಸಿದೆ.

ಧಾರವಾಡದ ಬಾವಿಕಟ್ಟಿ ಪ್ಲಾಟ್ ಬಡಾವಣೆ ನಿವಾಸಿಯಾಗಿರುವ ಪರಶುರಾಮ ಘಾಟಗೆ ಅವರು ತಮ್ಮ ಪತ್ನಿ ಪ್ರೀತಿ ಗರ್ಭವತಿಯಾದಾಗ (Pregnant), 3 ರಿಂದ 9 ತಿಂಗಳಿನವರೆಗೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿರುವ ಪ್ರಶಾಂತ ನರ್ಸಿಂಗ್ ಹೋಮ್‌ನ ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ತೋರಿಸಿದ್ದರು. ಒಟ್ಟು 5 ಬಾರಿ ಸ್ಕ್ಯಾನ್ ಮಾಡಿದ್ದರೂ ಗರ್ಭದಲ್ಲಿನ ಮಗುವಿನ (Baby) ಬೆಳವಣಿಗೆ ಚೆನ್ನಾಗಿದೆ ಎಂದು ವೈದ್ಯೆ ಹೇಳಿದ್ದರು. ಹೆರಿಗೆ ನೋವು ಆರಂಭವಾಗಿ, ಆಸ್ಪತ್ರೆಗೆ ಹೋದಾಗ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ. ಸೌಭಾಗ್ಯ ಕುಲಕರ್ಣಿ ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ಪರಶುರಾಮ ತಮ್ಮ ಪತ್ನಿಯನ್ನು ಧಾರವಾಡದ ಎಸ್‌ಡಿಎಮ್ ಆಸ್ಪತ್ರೆಗೆ ಕರೆದೊಯ್ದಿದ್ದರು.

husband forced a woman to eat human bones to get pregnant

2019ರ ಜನವರಿ 31 ರಂದು ಪ್ರೀತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವನ್ನು ನೋಡಿದ ತಂದೆ-ತಾಯಿಗೆ ಆಘಾತ ಆಗಿತ್ತು. ಏಕೆಂದರೆ ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ (Disability) ಕೂಡಿದ್ದವು. ಇದನ್ನು ನೋಡಿದ ಪೋಷಕರಿಗೆ ದಿಕ್ಕು ಕಾಣದಂತೆ ಆಗಿತ್ತು. ಬಳಿಕ ದಂಪತಿ ವೈದ್ಯೆ ಸೌಭಾಗ್ಯ ಕುಲಕರ್ಣಿ ಬಳಿ ಹೋಗಿ ಚರ್ಚೆ ಮಾಡಿದ್ದಾರೆ. ಆದರೆ ವೈದ್ಯೆ ತಮ್ಮ ತಪ್ಪೇ ಇಲ್ಲ ಎಂದಿದ್ದರು.

ಬಳಿಕ ಮಗುವಿನ ಪೋಷಕರು ಧಾರವಾಡ ಜಿಲ್ಲಾ ವ್ಯಾಜ್ಯಗಳ ಗ್ರಾಹಕರ ನ್ಯಾಯಾಲದ ಮೊರೆ ಹೋಗಿದ್ದರು. ಇದರಲ್ಲಿ ವೈದ್ಯರ ತಪ್ಪಾಗಿದೆ ಎಂದು ಮನಗಂಡು ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ 11.10 ಲಕ್ಷ ರೂ. ದಂಡ ವಿಧಿಸಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್‌ನ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದಾಗ ವೈದ್ಯರಿಗೆ ಎಲ್ಲಾ ವಿವರಗಳು ಗೊತ್ತಾಗುತ್ತದೆ. ಆದರೆ ಡಾ. ಸೌಭಾಗ್ಯ ಈ ಎಲ್ಲಾ ವಿಚಾರ ತಿಳಿದಿದ್ದರೂ ದಂಪತಿಗೆ ತಿಳಿಸಿರಲಿಲ್ಲ. ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಇದರಲ್ಲಿ ಕಂಡು ಬಂದಿದೆ. ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ವೈದ್ಯೆಗೆ 11.10 ಲಕ್ಷ ರೂ. ಪರಿಹಾರವನ್ನು ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಈ ಪರಿಹಾರ ನೀಡದಿದ್ದಲ್ಲಿ ಮೊತ್ತದ ಮೇಲೆ ಶೇ.8 ರಷ್ಟು ಬಡ್ಡಿ ಕೊಡುವಂತೆ ತಜ್ಞ ವೈದ್ಯರಿಗೆ ಆಯೋಗ ಆದೇಶಿಸಿದೆ. ಇದನ್ನೂ ಓದಿ: ಆದಿಯೋಗಿ ಪ್ರತಿಮೆ ವಿವಾದ – ಪಿಐಎಲ್‌ ವಜಾ, ಇಶಾ ಫೌಂಡೇಷನ್‌ಗೆ ಬಿಗ್‌ ರಿಲೀಫ್‌

ಈ ಬಗ್ಗೆ ವೈದ್ಯೆ ಡಾ. ಸೌಭಾಗ್ಯ ಕುಲಕರ್ಣಿ ಅವರನ್ನು ಕೇಳಿದರೆ, ಇದರಲ್ಲಿ ನನ್ನದೇನೂ ತಪ್ಪಿಲ್ಲ. ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಅಪರೂಪದಲ್ಲಿ ಅಪರೂಪದ ಪ್ರಕರಣವಿದು ಎಂದು ಹೇಳಿದ್ದಾರೆ. ದಂಡದ ಮೊತ್ತದಲ್ಲಿ 8 ಲಕ್ಷ ರೂ. ಯನ್ನು ಮಗುವಿನ ಹೆಸರಿನಲ್ಲಿ, ಆಕೆ ವಯಸ್ಕಳಾಗುವವರೆಗೆ ತಂದೆ-ತಾಯಿ ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿಡಲು ಮತ್ತು ಪರಿಹಾರದ ಪೂರ್ತಿ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಲು ಆಯೋಗ ತಿಳಿಸಿದೆ. ಇಂತಹದ್ದೊಂದು ತೀರ್ಪು ನೀಡುವ ಮೂಲಕ ಆಯೋಗ ನಿರ್ಲಕ್ಷ್ಯ ತೋರುವ ವೈದ್ಯರಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಬೊಮ್ಮಾಯಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *