ಧಾರವಾಡದ ಜನರಿಗೆ ಗುಡ್ ನ್ಯೂಸ್ – ಜಿಲ್ಲೆಯ ಕೊರೊನಾ ಸೋಂಕಿತ ಗುಣಮುಖ

Public TV
1 Min Read

– ರೋಗಿ 21 ಕಿಮ್ಸ್‌ನಿಂದ ಡಿಸ್ಚಾರ್ಜ್

ಹುಬ್ಬಳ್ಳಿ: ಕೋವಿಡ್-19 ಪಾಸಿಟಿವ್ ಸೋಂಕು ತಗುಲಿದ್ದ ಧಾರವಾಡದ ಹೊಸಯಲ್ಲಾಪುರ ನಿವಾಸಿ ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಿಂದ ದುಬೈ, ಮಸ್ಕತ್, ಪಣಜಿ ಮಾರ್ಗವಾಗಿ ಧಾರವಾಡ ನಗರಕ್ಕೆ ಮಾರ್ಚ್ 12ರಂದು ಆಗಮಿಸಿದ್ದ 33 ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಆದ್ದರಿಂದ ಮಾರ್ಚ್ 17ರಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾರ್ಚ್ 18 ರಿಂದ 21ರವರೆಗೆ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬಳಿಕ ಅವರ ಥ್ರೋಟ್ ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಪ್ರಯೋಗಾಲಯದ ರಿಪೋರ್ಟ್ ನಲ್ಲಿ ಕೋವಿಡ್-19 ಪಾಸಿಟಿವ್ ಬಂದ ದಿನದಿಂದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ಪಡೆದ ಅವರು ಚೇತರಿಸಿಕೊಳ್ಳತೊಡಗಿದರು. ಬಳಿಕ ಅವರ ಗಂಟಲು ದ್ರವದ ಪ್ರಯೋಗಾಲಯದ ಮಾದರಿಯನ್ನು ಮಾರ್ಚ್ 31 ಹಾಗೂ ಏಪ್ರಿಲ್ 3ರಂದು ಎರಡು ಬಾರಿ ಮತ್ತೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಎರಡೂ ಬಾರಿಯೂ ಕೋವಿಡ್-19 ನೆಗೆಟಿವ್ ವರದಿ ಬಂದಿದ್ದು, ಗುಣಮುಖರಾದ ಇವರನ್ನು ಭಾನುವಾರ ಸಂಜೆ ಕಿಮ್ಸ್ ನಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ.

ಗುಣಮುಖರಾದ ಅವರು ಧಾರವಾಡ ಜಿಲ್ಲೆಯ ಮೊದಲ ಹಾಗೂ ರಾಜ್ಯದ 21ನೇ ಕೊರೊನಾ ಸೋಂಕಿತ ವ್ಯಕ್ತಿಯಾಗಿದ್ದರು. ಕೋವಿಡ್-19 ಪಾಸಿಟಿವ್ ವ್ಯಕ್ತಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ರೋಗದಿಂದ ಗುಣಪಡಿಸುವಲ್ಲಿ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್, ಚಿಕಿತ್ಸೆ ನೀಡಿದ ತಜ್ಞ ವೈದ್ಯರು, ಶುಶ್ರೂಷಕಿಯರು, ಸಹಾಯಕ ಸಿಬ್ಬಂದಿ ಶ್ರಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ರೋಗಿಯ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಕ್ಕೆ ಬಂದ ಎಲ್ಲಾ ಜನರ ಮಾಹಿತಿಗಳನ್ನು ತ್ವರಿತವಾಗಿ ಸಂಗ್ರಹಿಸಿ ಅಗತ್ಯ ಇದ್ದವರನ್ನು ಪರೀಕ್ಷೆಗೊಳಪಡಿಸುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ್ ಮದೀನಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಸೇರಿದಂತೆ, ಆರೋಗ್ಯ, ಪೊಲೀಸ್, ಮಹಾನಗರಪಾಲಿಕೆ ಎಲ್ಲಾ ಸಂಬಧಿತ ಇಲಾಖೆಗಳು ಶ್ರಮಿಸಿದ್ದರು. ಅವರ ಪರಿಶ್ರಮಕ್ಕೆ ಜಿಲ್ಲಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *