– ದುಡ್ಡಿನ ಆಸೆಗೆ ನಾನು ಸಾಕ್ಷಿಯಾಗಲು ಒಪ್ಪಿಕೊಂಡೆ
– ಅವರು ಕೊಟ್ಟ ಬುರುಡೆಯನ್ನೇ ನಾನು ಕೋರ್ಟ್‌ಗೆ ನೀಡಿದ್ದೆ
– ಬೆದರಿಕೆಗೆ ಹೆದರಿ ಅವರು ಹೇಳಿದ್ದಂತೆ ಕೇಳಿದ್ದೇನೆ
ಮಂಗಳೂರು: ಬೇಕಾದರೆ ಕೋರ್ಟ್‌ಗೆ ಕರೆದುಕೊಂಡು ಹೋಗಿ. ನ್ಯಾಯಾಧೀಶರ ಮುಂದೆ ಸತ್ಯವನ್ನು ಹೇಳುತ್ತೇನೆ. ಈ ಪ್ರಕರಣದಿಂದ ನನ್ನನ್ನು ಬಿಟ್ಟು ಬಿಡಿ. ದಯವಿಟ್ಟು ನನ್ನನ್ನು ಪಾರುಮಾಡಿ ಎಂದು ಚಿನ್ನಯ್ಯ (Chinnayya) ವಿಶೇಷ ತನಿಖಾ ತಂಡ ಪೊಲೀಸರ (SIT Police) ಮುಂದೆ ಕಣ್ಣೀರು ಹಾಕುತ್ತಿದ್ದಾನೆ.
ಹೌದು. ಧರ್ಮಸ್ಥಳ (Dharmasthala) ಬುರುಡೆ ಪ್ರಕರಣದಲ್ಲಿ ಸಾಕ್ಷಿಧಾರನಾಗಿ ಈಗ ಆರೋಪಿಯಾಗಿರುವ ಚಿನ್ನಯ್ಯ ಎಸ್‌ಐಟಿ ಡ್ರಿಲ್‌ಗೆ ಥಂಡಾ ಹೊಡೆದಿದ್ದು ಬುರಡೆ ಗ್ಯಾಂಗ್‌ನ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ.
ಪ್ರಶ್ನೆ ಕೇಳುತ್ತಿದ್ದಂತೆ ಕಣ್ಣೀರು ಹಾಕುತ್ತಿರುವ ಚಿನ್ನಯ್ಯ ಈ ಪ್ರಕರಣದಲ್ಲಿ ನನಗೆ ಏನೂ ಗೊತ್ತಿಲ್ಲ. ದುಡ್ಡಿನ ಆಸೆಗೆ ನಾನು ಮುಂದೆ ಬಂದಿದ್ದೆ. ಆದರೆ ಈಗ ನಾನು ಮಾಡುತ್ತಿರುವುದು ತಪ್ಪು ಎನ್ನುವುದು ಗೊತ್ತಾಗಿದೆ. ಈ ಷಡ್ಯಂತ್ರದ ಹಿಂದೆ 12 ಮಂದಿ ಇರುವುದಾಗಿ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ ಎಂಬ ವಿಚಾರ ಎಸ್‌ಐಟಿ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
ಚಿನ್ನಯ್ಯ ಹೇಳಿದ್ದೇನು?
ನಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ ಮತ್ತು ಕೆಲ ಹೆಣಗಳನ್ನು ಹೂತಾಕಿದ್ದೂ ನಿಜ. ಆದರೆ ಸಾವಿರಾರು ಹೆಣ ಹೂತಿದ್ದೆ ಎನ್ನುವುದು ಸುಳ್ಳು. ಈ ಪ್ರಕರಣ ಇಷ್ಟು ದೊಡ್ಡದಾಗುತ್ತೆಂದು ಗೊತ್ತಿರಲಿಲ್ಲ. ಕೋರ್ಟ್‌ಗೆ ಕರೆದುಕೊಂಡು ಹೋದರೆ ನಾನು ಸತ್ಯ ಹೇಳುತ್ತೇನೆ. ಇದನ್ನೂ ಓದಿ: ತಿಮರೋಡಿ ಮನೆಯಿಂದ ಸಿಸಿಟಿವಿ ಹಾರ್ಡ್ ಡಿಸ್ಕ್, ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್ ವಶ
ನಾನು ಬುರುಡೆ ಗ್ಯಾಂಗ್ ನಂಬಿ ಮೋಸ ಹೋಗಿದ್ದು ಅವರು ಹೇಳಿದಂತೆ ಕೇಳಿದ್ದೇನೆ. ನಾನು ಪೊಲೀಸರಿಗೆ ಕೊಟ್ಟ ಬುರುಡೆ ಎಲ್ಲಿಯದ್ದು ಎನ್ನುವುದು ಗೊತ್ತಿಲ್ಲ. ಪಿತೂರಿ ಗ್ಯಾಂಗ್ ಕೊಟ್ಟ ಬುರುಡೆಯನ್ನೇ ನಾನು ನೀಡಿದ್ದೇನೆ. ಅವರು ನಾವು ಹೇಳಿದಷ್ಟು ಮಾಡು ಎಂದಿದ್ದರು. ಅದನ್ನೇ ನಾನು ಮಾಡಿದ್ದೇನೆ.
ನಾನು ದುಡ್ಡಿನ ಆಸೆಗೆ ಈ ಕೆಲಸ ಒಪ್ಪಿಕೊಂಡೆ. ಶವ ಶೋಧದ ವೇಳೆ ಅಸ್ಥಿ ಸಿಗುವುದಿಲ್ಲ ಎಂಬ ನಂಬಿಕೆ ಇತ್ತು. ಆದರೆ ಪಾಯಿಂಟ್ 6ರಲ್ಲಿ ತಲೆ ಬುರುಡೆ ಸಿಕ್ಕಾಗ ನಾನು ಗಾಬರಿಗೊಂಡೆ. ಅವತ್ತೇ ಸತ್ಯ ಹೇಳಬೇಕೆಂದು ತೀರ್ಮಾನಿಸಿದ್ದೆ.
ಶೋಧ ಕಾರ್ಯ ಮುಗಿಸಿ ವಾಪಸ್ಸಾದ ನಂತರ ಬುರುಡೆ ಗ್ಯಾಂಗ್ ನನ್ನ ಭೇಟಿ ಮಾಡಿತ್ತು. ನೀನು ಈಗ ಹಿಂದೇಟು ಹಾಕಿದರೆ ನಿನಗೇ ಕಷ್ಟವಾಗಲಿದೆ. ಧರ್ಮಸ್ಥಳದ ತೇಜೋವಧೆ ಮಾಡಿದ್ದೀಯ. ಎದುರಾಳಿಗಳು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕೊಲ್ಲುತ್ತಾರೆ ಎಂದು ಬೆದರಿಕೆ ಹಾಕಿದ್ದರು. ಈ ಬೆದರಿಕೆಗೆ ಹೆದರಿ ನಾನು ಅವರು ಹೇಳಿದಂತೆ ಕೇಳಿದ್ದೇನೆ.
ನಾನು ಹೂತ ಹೆಣಗಳೆಲ್ಲವೂ ಮಹಜರು ಮಾಡಿದ ಹೆಣಗಳು ಆಗಿತ್ತು. ಮಹಜರು ಮಾಡಿದ ಬಳಿಕವೇ ಶವ ಹೂಳಲು ಹೇಳುತ್ತಿದ್ದರು. ಸಾವಿರಾರು ಶವಗಳನ್ನು ನಾನು ಹೂಳಿಲ್ಲ. ಈ ರೀತಿ ಹೇಳುವಂತೆ ಅವರು ಸೂಚಿಸಿದ್ದರು. ನಾವು ಹೇಳಿಕೊಟ್ಟಂತೆ ಹೇಳು ಎಂದು ಅವರು ನನ್ನನ್ನು ಒತ್ತಾಯಿಸಿದ್ದರು. ಅದರಂತೆ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದೇನೆ.