ಬತ್ತಿಹೋಗಿದ್ದ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಹರಿವು

Public TV
1 Min Read

ಮಂಗಳೂರು: 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಬತ್ತಿಹೋಗಿದ್ದ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಹರಿವು ಆರಂಭಗೊಂಡಿದೆ.

ಮಳೆಯಿಂದಾಗಿ ಸ್ನಾನಘಟ್ಟದಲ್ಲಿ ನೀರು ಹರಿಯುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾನಘಟ್ಟದಲ್ಲಿ ಭಕ್ತರಿಗೆ ಸ್ನಾನಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಈ ಕಾರಣಕ್ಕಾಗಿ ಕ್ಷೇತ್ರದ ವತಿಯಿಂದ ಭಕ್ತಾಧಿಗಳು ನೀರಿನ ಸಮಸ್ಯೆ ನೀಗುವ ತನಕ ಕ್ಷೇತ್ರಕ್ಕೆ ಭೇಟಿ ನೀಡದಂತೆ ವಿನಂತಿಸಲಾಗಿತ್ತು.

ಕರಾವಳಿಯಲ್ಲಿ ಇನ್ನೂ ಮುಂಗಾರು ಬಿರುಸು ಪಡೆದಿಲ್ಲ. ನದಿ, ತೊರೆಗಳೂ ತುಂಬಿ ಹರಿದಿಲ್ಲ. ಆದರೆ ಕಡಲು ಮಾತ್ರ ಇನ್ನಿಲ್ಲದಂತೆ ಅಬ್ಬರಿಸುತ್ತಲೇ ಇದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕಳೆದ ನಾಲ್ಕೈದು ದಿನಗಳಿಂದ ತೀರದಲ್ಲಿ ಕಡಲು ಅಬ್ಬರಿಸತೊಡಗಿದೆ. ಭಾರೀ ಗಾಳಿಯ ಕಾರಣದಿಂದ ಕಡಲಿನ ಅಲೆಗಳು ಎರಡರಿಂದ ನಾಲ್ಕು ಮೀಟರ್ ಎತ್ತರಕ್ಕೆ ಏಳುತ್ತಿದ್ದು, ತೀರದಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿ ಬರುತ್ತಿದೆ.

ಮಂಗಳೂರಿನ ಸುರತ್ಕಲ್ ಬಳಿಯ ಮೀನ ಕುಳಿಯದಲ್ಲಿ ಕಡಲಿನ ಅಲೆಗಳು ಕೃಷಿ ಪ್ರದೇಶಕ್ಕೆ ನುಗ್ಗುತ್ತಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮಳೆ ಇಲ್ಲದಿದ್ದರೂ ಈ ಪರಿಯಾಗಿ ಕಡಲು ನುಗ್ಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಉಚ್ಚಿಲ ಸೋಮೇಶ್ವರದ ಭಟ್ಟಂಪಾಡಿಗೆ ಭೇಟಿ ನೀಡಿದ ಬಿಜೆಪಿ ಸಂಸದೀಯ ಮಂಡಳಿ ಸಚೇತಕರಾದ ನಳಿನ್ ಕುಮಾರ್ ಕಟೀಲ್ ಕಡಲು ಕೊರೆತದ ಪ್ರಭಾವವನ್ನು ವೀಕ್ಷಿಸಿ ಸಂತ್ರಸ್ತರಿಗೆ ಸರ್ಕಾರದ ಸಹಾಯದ ಭರವಸೆ ನೀಡಿದ್ದಾರೆ.

ಈ ಹಿಂದೆ ಮಾತನಾಡಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಾಲಿಕವಾಗಿ ನೀರಿದೆ. ಅದು ನೇತ್ರಾವತಿ ಕಿಂಡಿ ಅಣೆಕಟ್ಟಿನಲ್ಲಿ ತಾತ್ಕಾಲಿಕ ನೀರು ಹಾಗೂ ತೀರ್ಥದ ಗುಂಡಿಯಲ್ಲಿ ಸ್ವಲ್ಪ ನೀರಿದೆ. ಮುಂದೆ ಮಳೆ ಬರದಿದ್ದರೆ ಮಂಜುನಾಥನಿಗೂ ಬರದ ಬಿಸಿ ತಟ್ಟಲಿದೆ. ಅಲ್ಲಿನ ತೀರ್ಥ ಗುಂಡಿಯಲ್ಲೂ ನಾಲ್ಕು ಅಡಿ ನೀರು ಕಡಿಮೆ ಆಗಿದೆ. ಹಿಂದೆಯೂ ಈ ರೀತಿ ಆಗಿದೆ. ಆದರೆ ಇಷ್ಟು ತೀವ್ರವಾಗಿ ಆಗಿರಲಿಲ್ಲ. ಉಪನದಿಗಳಲ್ಲಿ ನೀರು ಬತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ಆಗಿದೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *