ಧಾರಾಕಾರ ಮಳೆ ನಡುವೆ ನಂ.10 ರಲ್ಲಿ ಶೋಧ – ದೂರುದಾರ ವ್ಯಕ್ತಿಗೆ ಮತ್ತೆ ನಿರಾಸೆ

Public TV
2 Min Read

– 9 & 10ನೇ ಪಾಯಿಂಟ್‌ನಲ್ಲಿ ದಿನಪೂರ್ತಿ ಶೋಧಿಸಿದರೂ ಪತ್ತೆಯಾಗದ ಕುರುಹು

ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ದಿನ ಶೋಧ ಕಾರ್ಯ ನಡೆಯಿತು. ಬಹಳ ಕುತೂಹಲಕ್ಕೆ ಕಾರಣವಾಗಿದ್ದ 9 ಮತ್ತು 10ನೇ ಪಾಯಿಂಟ್‌ನಲ್ಲಿ ದಿನಪೂರ್ತಿ ಶೋಧಿಸಿದರೂ ಕುರುಹು ಪತ್ತೆಯಾಗಿಲ್ಲ. ಈ ನಡುವೆ ಭಾನುವಾರ ಬ್ರೇಕ್ ನೀಡಲಾಗಿದ್ದು, ಉಳಿದ ಮೂರು ಸ್ಪಾಟ್‌ಗಳ ಬಗ್ಗೆ ಕುತೂಹಲ ಹೆಚ್ಚಿದೆ. ಮುಸುಕುದಾರಿಯ ಮೇಲೆ ಅನುಮಾನಗಳು ಕೂಡ ಶುರುವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮ ಈಗ ದೇಶದ ಕುತೂಹಲದ ಕೇಂದ್ರಬಿಂದು‌‌. ನೂರಾರು ಶವಗಳನ್ನು ಹುಟ್ಟುತ್ತಿದ್ದೇನೆ ಎಂಬ ಅನಾಮಿಕ ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಒಟ್ಟು 10 ಕಡೆಗಳಲ್ಲಿ ಸಮಾಧಿ ಆಗೆಯುವ ಕೆಲಸವನ್ನು SIT ತಂಡ ಮಾಡಿತ್ತು. ಎಲ್ಲರ ಕೇಂದ್ರಬಿಂದು ಆಗಿದ್ದು 9ನೇ ಸ್ಪಾಟ್ ನಾಲ್ಕೈದು ಶವಗಳನ್ನು ಸಾಲು ಸಾಲಾಗಿ ಹೂತು ಹಾಕಿದ್ದೆ ಎಂದು ಅನಾಮಿಕ ವ್ಯಕ್ತಿ ದೂರ ನೀಡಿದ್ದ. ಎಸ್ಐಟಿ ಕಾರ್ಯಾಚರಣೆ ನಡೆಸಿದ ಮಧ್ಯಾಹ್ನ 2:30 ರ ಸುಮಾರಿಗೆ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿಲ್ಲ.

3:30 ಸುಮಾರಿಗೆ ಎಸ್ಐಟಿ ಪೊಲೀಸರು ದೂರುದಾರ ವ್ಯಕ್ತಿಯನ್ನು ಕರೆತಂದು ಸ್ಪಾಟ್‌ಗೆ ಹಾಜರಾಗಿದ್ದರು. ಉತ್ಕನನ ಮಾಡುವ ಸಂದರ್ಭ ಬಂಡೆಕಲ್ಲುಗಳು ಆಗಾಗ ಅಡ್ಡ ಬರುತ್ತಿದ್ದರಿಂದ ಇಂದು ಕೂಡ ಸಮತಟ್ಟು ಮಾಡಲು ಮತ್ತು ಹೊಂಡ ತೋಡಲು ಮಿನಿ ಹಿಟಾಚಿಯನ್ನು ಬಳಸಲಾಗಿತ್ತು. ಹತ್ತರಲ್ಲಿ ಶೋಧ ನಡೆಸುವಾಗ ಧಾರಾಕಾರ ಮಳೆ ಆರಂಭವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಬಿಟ್ಟುಬಿಡದೆ ಮಳೆ ಸುರಿದರೂ ಕೂಡ ಕಾರ್ಯಾಚರಣೆಯನ್ನು ಅಧಿಕಾರಿಗಳು ನಿಲ್ಲಿಸಲಿಲ್ಲ. ತಾರ್ಪಾಲ್‌ಗಳನ್ನು ಬಳಸಿ ಕಾಡಿನ ನಡುವೆ ಶೋಧ ಕಾರ್ಯ ನಡೆಸಿದರು. ಹತ್ತನೇ ಪಾಯಿಂಟ್‌ನಲ್ಲೂ ಕೂಡ ದೂರುದಾರನಿಗೆ ಹಿನ್ನಡೆಯಾಗಿತ್ತು.

ಬಾಕಿ ಉಳಿದಿರೋದು ಮೂರು ಜಾಗ ಮಾತ್ರ. ನೂರಾರು ಶವಗಳು ಇವೆ ಎಂದಿದ್ದ ದೂರುದಾರ ತೋರಿಸಿದ ಜಾಗದಲ್ಲಿ ಸಿಕ್ಕಿದ್ದು, ಒಂದು ಕಡೆ ಕುರುಹುಗಳು ಮಾತ್ರ. ಪೊಲೀಸರು, ಸಾರ್ವಜನಿಕರನ್ನು ದೂರುದಾರ ಯಾಮಾರಿಸಿದನಾ? ಇಡೀ ವ್ಯವಸ್ಥೆಯ ಕಾಲಹರಣ ಮಾಡಿದ ಎಂಬ ಸಂಶಯಗಳು ಕೇಳಿ ಬರುತ್ತಿದೆ. 13 ಸ್ಥಳಗಳ ಅನ್ವೇಷಣೆಯ ನಂತರ ದೂರುದಾರ ವ್ಯಕ್ತಿಗೆ ತೀವ್ರ ವಿಚಾರಣೆ ನಡೆಯಲಿದೆ.

Share This Article