– ಬಿಜೆಪಿ ಮುಸುಕುಧಾರಿಯ ಹಿಂದೆ ಇದೆ
– ಡಿಕೆಶಿ ಹೇಳಿಕೆಗೆ ನನ್ನ ಸಹಮತವಿದೆ
ಉಡುಪಿ: ಸರ್ಕಾರ ಧರ್ಮಸ್ಥಳದ (Dharmasthala) ಜೊತೆಗೆ ಇರುತ್ತದೆ. ಅನಾಮಿಕ ನೂರಾರು ಕಲ್ಪನೆಯ ಕಥೆ ಹೇಳುತ್ತಿದ್ದಾನೆ. ಸರ್ಕಾರದ ದಿಕ್ಕು ತಪ್ಪಿಸಿದವರನ್ನು ನಾವು ಬಿಡೋದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.
ಉಡುಪಿಯಲ್ಲಿ `ಪಬ್ಲಿಕ್ ಟಿವಿ’ ಜೊತೆ ಅವರು ಮಾತನಾಡಿದರು. ಈ ವೇಳೆ, ಧರ್ಮಸ್ಥಳ ಬಹಳ ಪವಿತ್ರವಾದದ್ದು, ಅಲ್ಲಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಗುಂಡಿ ಮೇಲೆ ಗುಂಡಿ ತೋಡಿದರೂ, ಬೆಟ್ಟ ಅಗೆದರು ಇಲಿಯೂ ಸಿಗಲಿಲ್ಲ. ಸರ್ಕಾರ ಧರ್ಮಸ್ಥಳದ ಜೊತೆಗೆ ಯಾವತ್ತೂ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ
ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿನ ಮಹಲ್ ಕಟ್ಟಿದರು. ಆಗ ಆರೋಪ ಮಾಡಿದ್ದು ಇದೇ ಬಿಜೆಪಿ, ಈಗ ಗೋಸುಂಬೆ ಕಣ್ಣೀರು ಹಾಕುತ್ತಿರುವುದು ಇದೇ ಬಿಜೆಪಿ. ರಾಜ್ಯ, ದೇಶ ವಿದೇಶದಲ್ಲೂ ಈ ವಿಚಾರ ಚರ್ಚೆಯಾಯಿತು. ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿದವರಿಗೆ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಎಸ್‍ಐಟಿ ತನಿಖೆ ಅದರ ಪಾಡಿಗೆ ನಡೆಯುತ್ತಿದೆ. ಬಹಳ ಜನ ಆರೋಪ ಮಾಡುತ್ತಿದ್ದರು, ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದರು. ಎಲ್ಲಾ ಚರ್ಚೆಗಳಿಗೆ ಫುಲ್‍ಸ್ಟಾಪ್ ಹಾಕಲು ಗೃಹ ಸಚಿವರು ಎಸ್‍ಐಟಿ ರಚಿಸಿದರು. ಹುಳ ಬಿಟ್ಟು ಚರ್ಚೆ ಶುರು ಮಾಡಿದ್ದರು, ಅದು ಸಂಪೂರ್ಣ ನಾಶವಾಗಲಿ ಎಂದಿದ್ದಾರೆ.
ಬಿಜೆಪಿ (BJP) ಸಾವಿರ ಮಾತನಾಡಬಹುದು, ಆದರೆ ಮುಸುಕುಧಾರಿಯ ಹಿಂದೆ ಇದೆ. ಎಲ್ಲರ ನಾಟಕ, ದೊಂಬರಾಟ ಮುಗಿಯಲಿ ಎಂದು ಎಸ್‍ಐಟಿ ರಚಿಸಲಾಗಿದೆ. ನಾನು ಮಂಜುನಾಥ ಸ್ವಾಮಿಯ ಭಕ್ತೆ, ಧರ್ಮಸ್ಥಳದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸವಿದೆ. ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆಗೆ ನನ್ನ ಸಹಮತವಿದೆ ಎಂದು ಇದೇ ವೇಳೆ ಹೇಳಿದ್ದಾರೆ.
ಸರ್ಕಾರಕ್ಕೆ ಬದ್ಧತೆ ಮತ್ತು ಕಾಳಜಿ ಇದೆ. ಧರ್ಮಸ್ಥಳ ಎಂದರೆ ಧರ್ಮದಿಂದ ನಡೆದುಕೊಳ್ಳುವ ಸ್ಥಳ. ಧರ್ಮಸ್ಥಳಕ್ಕೆ ಕಳಂಕ ಕಟ್ಟುವ ಕೆಲಸ ನಿಲ್ಲಬೇಕು. ಸೌಜನ್ಯ ಪ್ರಕರಣ ಮತ್ತು ರಾಜ್ಯದ ಹೆಣ್ಣು ಮಕ್ಕಳ ನೋವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ದೇಗುಲದ ವಠಾರದಲ್ಲಿ ಸ್ಥಳ ಮಹಜರು