ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?

Public TV
2 Min Read

ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial Case) ರೋಚಕ ತಿರುವ ಸಿಗುವ ಸಾಧ್ಯತೆಯಿದೆ. ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿರುವ ಸಾಕ್ಷಿದಾರನ (Witness) ಪರವಾಗಿ ಮತ್ತೆ 6 ಜನ ಸ್ಥಳೀಯರು ಮುಂದೆ ಬರುವ ಸಾಧ್ಯತೆಯಿದೆ.

ಹೌದು. ದೂರಿನಲ್ಲಿ ದೂರುದಾರ ನಾನೊಬ್ಬನೇ 13 ಜಾಗಗಳಲ್ಲಿ ಹೆಣವನ್ನು ಹೂತಿದ್ದೇನೆ ಎಂದು ತಿಳಿಸಿದ್ದ. ಇಲ್ಲಿಯವರೆಗೆ ಪಾಯಿಂಟ್‌ ಸಂಖ್ಯೆ 12ರವರೆಗೆ ಶೋಧ ನಡೆದಿದ್ದು 6ನೇ ಪಾಯಿಂಟ್‌ನಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿದೆ. ಉಳಿದ 12 ಜಾಗದಲ್ಲಿ ಯಾವುದೇ ಅಸ್ಥಿ ಪತ್ತೆಯಾಗಿಲ್ಲ.

ದೂರುದಾರನ ಈ ಪ್ರಯತ್ನ ವಿಫಲವಾದ ಬೆನ್ನಲ್ಲೇ ಆತ ಹೆಣ ಹೂತು ಹಾಕಿದ್ದನ್ನು ನೋಡಿದ್ದೇವೆ. ಆತನ ಹುಡುಕಾಟದಲ್ಲಿ ತಾವು ಕೂಡ ಸಹಾಯ ಮಾಡುವುದಾಗಿ 6 ಮಂದಿ ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ.

6 ಜನ ಬಂದಿರುವ ಬಗ್ಗೆ ವಿಶೇಷ ತನಿಖಾ ತಂಡ (SIT) ಅಧಿಕೃತವಾಗಿ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈಗ ಈ 6 ಜನರ ಸ್ಥಳೀಯರ ಮಾಡುತ್ತಿರುವ ಆರೋಪದ ಅಸಲಿಯತ್ತಿನ ಬಗ್ಗೆ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಇಂದು ಕೊನೆಯ ಪಾಯಿಂಟ್‌ನಲ್ಲಿ ಶೋಧ

ಚರ್ಚೆ ಏನು?
ದೂರುದಾರ ತಾನೊಬ್ಬನೇ ಹೂತಿರುವುದಾಗಿ ದೂರು ನೀಡಿದ್ದು ಈ ಆಧಾರದಲ್ಲಿ ಈಗ ತನಿಖೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಧರ್ಮಸ್ಥಳ ತೊರೆದ ನಂತರ ನನಗೆ ಜೀವ ಭಯ ಇತ್ತು. ಈ ಕಾರಣಕ್ಕೆ ನಾನು ಇಲ್ಲಿಯವರೆಗೆ ಮುಂದೆ ಬಂದಿಲ್ಲ ಎಂದು ಹೇಳಿದ್ದ.

ಈಗ ಹೊಸದಾಗಿ 6 ಜನ ಸ್ಥಳೀಯರೇ ಬಂದಿರುವ ಕಾರಣ ಇಲ್ಲಿಯವರೆಗೆ ಅವರು ಯಾಕೆ ಮೌನವಾಗಿದ್ದರು? ಸ್ಥಳೀಯರೇ ಆಗಿದ್ದರೆ ಈ ಮೊದಲೇ ದೂರು ನೀಡಬಹುದಿತ್ತು. ಅಷ್ಟೇ ಅಲ್ಲದೇ ಈ ಪ್ರಕರಣ ಸದ್ದು ಮಾಡಿದ ನಂತರ ಎಸ್‌ಐಟಿ ರಚನೆಯಾಗಿ 12 ಸ್ಥಳಗಳವರೆಗೆ ಶೋಧ ನಡೆಸುವವರೆಗೆ ಸುಮ್ಮನ್ನಿದ್ದ ಈ ವ್ಯಕ್ತಿಗಳು ಶೋಧ ನಡೆಸುವಾಗ ಮೊದಲೇ ಯಾಕೆ ಮುಂದೆ ಬರಲಿಲ್ಲ ಎಂಬ ಪ್ರಶ್ನೆಯ ಜೊತೆ ಹಲವು ಅನುಮಾನ ಎದ್ದಿದೆ.

ಎಸ್‌ಐಟಿ ಸೋಮವಾರ ಪಾಯಿಂಟ್‌ ಸಂಖ್ಯೆ 11 ರಲ್ಲಿ ಉತ್ಕನನ ನಡೆಸಬೇಕಿತ್ತು. ಆದರೆ ಈ ಜಾಗದ ಮೇಲಿನ ಭಾಗಕ್ಕೆ ತೆರಳಿತ್ತು. ಈ ಜಾಗದಲ್ಲಿ ತೆರಳಿದಾಗ ಮನುಷ್ಯನ ಮೂಳೆಗಳು ಸಿಕ್ಕಿತ್ತು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೂಳೆ ಇದಾಗಿದ್ದು ನೆಲದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ: ದಿನಕ್ಕೆ ಅಂದಾಜು 2 ಲಕ್ಷ ರೂ. ಖರ್ಚು- ಯಾವುದಕ್ಕೆ ಎಷ್ಟು?

ಶವ ಹೂತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆಯಾಗಿದ್ದು ಈಗ ನೆಲದ ಮೇಲೆ ಅಸ್ಥಿ  ಸಿಕ್ಕಿದ್ದರಿಂದ ಇದರ ತನಿಖೆಗೆ ಇಳಿದಿದೆ. ಈ ಮೊದಲು ಜಯಂತ್‌ ಟಿ ಅವರು ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮೃತದೇಹಗಳನ್ನು ಹೂತು ಹಾಕಲಾಗಿದೆ. ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ತಾನು ನೋಡಿದ್ದೇನೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವೂ ಈಗ ಎಸ್‌ಐಟಿಗೆ ವರ್ಗಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ದೂರು ನೀಡಲು ಮುಂದೆ ಬಂದರೆ ಎಸ್‌ಐಟಿ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ. ಆ ಎಲ್ಲಾ ವ್ಯಕ್ತಿಗಳು ಮಾಡಿದ ದೂರುಗಳನ್ನು ಸ್ವೀಕಾರ ಮಾಡುತ್ತಾ ಎನ್ನುವ ದೊಡ್ಡ ಪ್ರಶ್ನೆ ಎದ್ದಿದೆ.

Share This Article