ಧರ್ಮಸ್ಥಳ ಬುರುಡೆ ರಹಸ್ಯ| ಕಗ್ಗಂಟಾಗಿದೆ 13ನೇ ಪಾಯಿಂಟ್ – ಸವಾಲುಗಳ ಮಧ್ಯೆ ಉತ್ಖನನಕ್ಕೆ ರೆಡಿಯಾದ ಎಸ್‌ಐಟಿ

Public TV
2 Min Read

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ (Dharmasthala Mass Burial Case) ಶವಗಳನ್ನು ಹೂತಿಟ್ಟ ಪ್ರಕರಣದ ಉತ್ಖನನ ಕಾರ್ಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಯ ಪಾಯಿಂಟ್ ಆಗಿರುವ 13ನೇ ಜಾಗದ ಉತ್ಖನನ ವಿಶೇಷ ತನಿಖಾ ತಂಡ(SIT) ಕಗ್ಗಂಟಾಗಿದ್ದು ಇಂದು ಶೋಧ ನಡೆಯಲಿದೆ.

ದೂರುದಾರ ತೋರಿಸಿದ 13 ಕಡೆಗಳಲ್ಲೂ ಭೂಮಿ ಅಗೆದು ಹುಡುಕಿದರೂ ಪಾಯಿಂಟ್‌ ಸಂಖ್ಯೆ 6 ಹೊರತು ಪಡಿಸಿ ಬೇರೆ ಕಡೆ ಏನೂ ಸಿಗಲಿಲ್ಲ. ನೂರಾರು ಶವ ಹೂತಿಟ್ಟಿದ್ದೇನೆ ಎಂದಿದ್ದ ದೂರುದಾರನೂ ಇದೀಗ ಪಾಯಿಂಟ್ ನಂಬರ್ 13ರಲ್ಲಿ ರಾಶಿ ರಾಶಿ ಹೆಣಗಳಿದೆ ಎಂದು ಹೇಳಿದ್ದಾನೆ. ಈ ಕಾರಣಕ್ಕೆ ಸಾಕಷ್ಟು ಉದ್ದ ಅಗಲಕ್ಕೆ ಮಾರ್ಕ್ ಮಾಡಲಾಗಿದೆ. ಅದರೆ ಈ ಪಾಯಿಂಟ್ ಎಸ್‌ಐಟಿ ಅಧಿಕಾರಿಗಳಿಗೆ ಕಗ್ಗಂಟಾಗಿದೆ.

ಬುಧವಾರ ಉತ್ಖನನ ಮಾಡಿ ಮುಗಿಸಬೇಕಿದ್ದ ಈ 13ನೇ ಪಾಯಿಂಟ್ ಅಗೆಯದೇ 14 ನೇ ಪಾಯಿಂಟ್ ಉತ್ಖನನ ನಡೆಸಿದ್ದರು. ಈ 13ನೇ ಪಾಯಿಂಟ್‌ನ ಮಧ್ಯಭಾಗದಲ್ಲೇ ಎರಡು ವಿದ್ಯುತ್ ಕಂಬಗಳಿದೆ. ಅಷ್ಟೇ ಅಲ್ಲದೇ ಪಕ್ಕದಲ್ಲೇ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಸಣ್ಣ ಅಣೆಕಟ್ಟು ಇದೆ. ಪಾಯಿಂಟ್ ಪಕ್ಕದಲ್ಲೇ ಸಾರ್ವಜನಿಕ ರಸ್ತೆ ಇದೆ. ಹೀಗಾಗಿ ಈ ಎಲ್ಲಾ ಸವಾಲು ಸರಿಪಡಿಸಲು ಒಂದು ದಿನ ಉತ್ಖನನವನ್ನು ಮುಂದೂಡಿದ್ದರು.  ಇದನ್ನೂ ಓದಿ: ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ ಸಿಡಿದ ಧರ್ಮಸ್ಥಳದ ಭಕ್ತರು

 

ಈ ಜಾಗವನ್ನು ಉತ್ಖನನ ಮಾಡಲು ಎಸ್‌ಐಟಿ ಸಿದ್ಧತೆ ಮಾಡಿದ್ದು, ಧರ್ಮಸ್ಥಳ ಗ್ರಾಮಪಂಚಾಯತ್, ನೀರಾವರಿ ಇಲಾಖೆ, ಮೆಸ್ಕಾಂ ಇಲಾಖೆ ಜೊತೆ ಸಭೆ ನಡೆಸಿದ್ದಾರೆ. ಕಿರು ಅಣೆಕಟ್ಟು ಪಕ್ಕದಲ್ಲಿ ನೆಲ ಅಗೆಯುವುದು ಹೇಗೆ? ವಿದ್ಯುತ್ ಕಂಬಗಳಿರುವ ಜಾಗದಲ್ಲಿ ಏನ್ ಮಾಡಬೇಕು ಎಂಬ ಬಗ್ಗೆ ತಜ್ಞರ ಅಭಿಪ್ರಾಯವನ್ನು ಎಸ್‌ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.   ಇದನ್ನೂ ಓದಿ: ಧರ್ಮಸ್ಥಳ ಕೇಸ್; 2 ಗುಂಪುಗಳ ನಡುವೆ ಮಾರಾಮಾರಿ ವರದಿಗೆ ಹೋದ ಖಾಸಗಿ ವಾಹಿನಿ ವರದಿಗಾರ, ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ

ಈ ಹಿನ್ನಲೆಯಲ್ಲೇ ಇಂದು ಉತ್ಖನನ ನಡೆಸಲು ಎಸ್‌ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಈ ನಡುವೆ 13 ಕಡೆ ಭೂಮಿ ಅಗೆದರೂ ಏನೂ ಸಿಗದೇ ಇರುವ ಕಾರಣ ಮುಸುಕುಧಾರಿ ಅನಾಮಿಕ ಹೇಳುತ್ತಿರುವುದು ಸುಳ್ಳಾ ಎಂಬ ಪ್ರಶ್ನೆಯೂ ಎದ್ದಿದೆ. ಆತ ಹೇಳಿದ ಯಾವ ಪಾಯಿಂಟ್‌ನಲ್ಲೂ ಕಳೇಬರಗಳೇ ಸಿಗದೇ ಇದ್ದು ಹೊಸ ದಿಕ್ಕಿನಲ್ಲೂ ಹುಡುಕಿದರೂ ಯಾವುದೇ ಕುರುಹುಗಳು ಸಿಕ್ಕಿಲ್ಲ. ಹೀಗಾಗಿ ಮುಸುಕುಧಾರಿ ಅನಾಮಿಕನ ವಿರುದ್ಧವೇ ರಿವರ್ಸ್ ತನಿಖೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ದಿನದಿಂದ ದಿನಕ್ಕೆ ಕುತೂಹಲ ಹುಟ್ಟಿಸಿದ ಈ ತಲೆ ಬುರುಡೆ ಕಥೆಯನ್ನು ಅನಾಮಿಕ ವ್ಯಕ್ತಿ ಬುರುಡೆ ಬಿಟ್ಟಿದ್ದಾನಾ ಎಂಬ ಮಾತುಗಳು ಈಗ ಹರಿದಾಡಲು ಆರಂಭವಾಗಿದೆ. ಆತ ಎಸ್‌ಐಟಿ ಸೇರಿದಂತೆ ಎಲ್ಲರ ದಿಕ್ಕು ತಪ್ಪಿಸಿದ್ದಾನಾ ಎಂಬ ಅನುಮಾನವೂ ಹೆಚ್ಚಾಗಿದೆ. ಒಟ್ಟಿನಲ್ಲಿ ಇಂದು ಉತ್ಖನನ ಮಾಡುವ ಪಾಯಿಂಟ್‌ನಲ್ಲಿ ಏನಾಗುತ್ತದೆ ಎಂಬ ನಿರೀಕ್ಷೆ, ಕುತೂಹಲ ಎಲ್ಲರಲ್ಲಿದೆ.

Share This Article